ಪಕ್ಷದಲ್ಲಿ ಹಿರಿಯರಿಗೆ ಅವಮಾನ : ರೊಚ್ಚಿಗೆದ್ದ ರಾಮುಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.2- ನನ್ನ ಪಕ್ಷದಲ್ಲಿ ಹಿರಿಯರಿಗೆ ಅವಮಾನವಾಗುತ್ತದೆ ಎಂದು ಸಚಿವ ಶ್ರೀರಾಮುಲು ಪರೋಕ್ಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿಯಲ್ಲಿ ಹಿರಿಯರಿಗೆ ಅಪಮಾನವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಿಮ್ಮ ಪ್ರಶ್ನೆ ಸಮಂಜಸವಾಗಿದೆ. ನೀವು ಹೇಳಿರುವುದು ಸರಿಯಾಗಿಯೇ ಇದೆ. ಇದನ್ನು ನಾನು ಕೂಡ ಒಪ್ಪುತ್ತೇನೆ ಎಂದು ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಬೆಳವಣಿಗೆಗಳಿಂದ ನೋವಾಗುತ್ತಿದೆ. ವೈಯಕ್ತಿಕವಾಗಿ ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ ಎನ್ನುತ್ತಲೇ ವಿಜಯೇಂದ್ರ ವಿರುದ್ಧ ಕಿಡಿಕಾರಿದರು. ನನ್ನ ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧಿಸಿರುವುದರಿಂದ ನನಗೆ ವೈಯಕ್ತಿಕವಾಗಿ ಮನಸ್ಸಿಗೆ ನೋವಾಗಿದೆ. ಬಿ.ವೈ.ವಿಜಯೇಂದ್ರ ಇದನ್ನು ನನ್ನ ಗಮನಕ್ಕೆ ತಂದಿದ್ದರೆ ನಾನೇ ಸರಿಪಡಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರಿಗಾದರೂ ಸರ್ಕಾರಿ ಕೆಲಸ ಕೊಡಿಸುವ ಅಧಿಕಾರಿಗಳ ವರ್ಗಾವಣೆ ಇಲ್ಲವೇ ಮುಖ್ಯಮಂತ್ರಿಗಳ ಕಚೇರಿ ಹೆಸರು ಬಳಸಿಕೊಂಡು ದುರ್ಬಳಕೆ ಮಾಡಿರುವ ನಿದರ್ಶನಗಳಿದ್ದರೆ ನನ್ನ ಗಮನಕ್ಕೆ ತಂದಿದ್ದರೆ ಖಂಡಿತವಾಗಿಯೂ ನಾನು ಕ್ರಮ ಕೈಗೊಳ್ಳುತ್ತಿದ್ದೆ ಎಂದು ತಿಳಿಸಿದರು. ದೂರು ನೀಡಿರುವುದರ ಬಗ್ಗೆ ನನಗೇನೂ ಅಸಮಾಧಾನವಿಲ್ಲ. ನನ್ನ ಆಪ್ತ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದರೆ ಕೆಲಸದಿಂದ ಕಿತ್ತು ಹಾಕುತ್ತಿದ್ದೆ. ಏಕಾಏಕಿ ಇಂತಹ ಘಟನೆ ನಡೆದಿರುವುದು ನನ್ನ ಮನಸಿಗೂ ನೋವು ತಂದಿದೆ ಎಂದರು.

ಯಾರೊಬ್ಬರೂ ಕೂಡ ಯಾರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಾರದು. ನಾವು ನಂಬಿಕೆ , ವಿಶ್ವಾಸದ ಮೇಲೆ ಕೆಲವರನ್ನು ನೇಮಿಸಿಕೊಂಡಿರುತ್ತೇವೆ. ನಮ್ಮ ಹೆಸರಿಗೆ ಮಸಿ ಬಳಿಯುವ ಯತ್ನ ಮಾಡಲಾಗುತ್ತಿದೆ ಎಂದು ದೂರಿದರು. ಈ ಸಂಬಂಧ ನಾನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ನನ್ನ ಹೆಸರಿನಲ್ಲಿ ಹಣ ಕೇಳಿದರೆ ಕೊಡಬಾರದು. ರಾಜು ನನಗೆ ಅತ್ಯಂತ ಆತ್ಮೀಯನಾಗಿದ್ದ. ಆತನ ವಂಚನೆ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳಿದರು.

ಈಗಾಗಲೇ ಎಫ್‍ಐಆರ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಇಂಥ ಸಂದರ್ಭದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ. ತನಿಖೆ ನಡೆದು ಸತ್ಯಾಸತ್ಯತೆ ಹೊರಬರಲಿ. ಪ್ರಕರಣದ ಬಗ್ಗೆ ವಿಜಯೇಂದ್ರ ಜೊತೆಯೂ ಮಾತನಾಡುವುದಾಗಿ ಹೇಳಿದರು.

Facebook Comments