ತಿಂಗಳೊಳಗೆ ಗುತ್ತಿಗೆ ವೈದ್ಯರ ಖಾಯಂ : ಸರ್ಕಾರದ ಭರವಸೆ, ಪ್ರತಿಭಟನೆ ಕೈಬಿಟ್ಟ ಡಾಕ್ಟರ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.8- ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ಹಲವು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ವೈದ್ಯರನ್ನು ಇನ್ನು ಒಂದು ತಿಂಗಳ ಒಳಗೆ ಖಾಯಂಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸರ್ಕಾರದಿಂದ ಸ್ಪಷ್ಟ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ವೈದ್ಯರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಅಲ್ಲದೆ ನಾಳೆಯಿಂದಲೇ ಎಲ್ಲಾ ವೈದ್ಯರು ಕರ್ತವ್ಯಕ್ಕೆ ಹಾಜರಾಗುವ ವಾಗ್ದಾನವನ್ನು ಮಾಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಜೊತೆ ನಡೆಸಿದ ಸಂಧಾನ ಯಶಸ್ವಿಯಾಗಿದ್ದರಿಂದ ಗುತ್ತಿಗೆ ವೈದ್ಯರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ವೈದ್ಯರ ಸೇವೆಯನ್ನು ಖಾಯಂಗೊಳಿಸಲು ಹಾಲಿ ಇರುವ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಸೂಚಿಸಿದ್ದಾರೆ.  ಸಿಎಂ ಭೇಟಿಯಾದ ಬಳಿಕ ಗುತ್ತಿಗೆ ವೈದ್ಯರು ಸಂಘದ ಪದಾಧಿಕಾರಿಗಳ ಮಾತುಕತೆ ನಡೆಸಿದ ಸಚಿವ ಶ್ರೀರಾಮುಲು, ಪ್ರತಿಭಟನೆಯನ್ನು ಕೈಬಿಡಬೇಕೆಂದು ಮನವಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ವೈದ್ಯರ ಜೊತೆಗೆ ಒಟ್ಟು 2000 ವೈದ್ಯರ ಸೇವೆಯನ್ನು ಖಾಯಂಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.  ಈ ಸಂಬಂಧ ನಾಳೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹಾಲಿ ಇರುವ ನಿಯಮಗಳಿಗೆ ತಿದ್ದುಪಡಿ ಮಾಡಲು ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಸೂಚಿಸಲಾಗಿದೆ. ಇನ್ನು ಒಂದು ತಿಂಗಳ ಒಳಗೆ ಗುತ್ತಿಗೆ ವೈದ್ಯರ ಸೇವೆ ಖಾಯಂ ಆಗಲಿದೆ ಎಂದು ಹೇಳಿದರು.

ಇವರಲ್ಲಿ 7ರಿಂದ 5, 4, ಮೂರು ವರ್ಷಗಳ ಸೇವೆ ಸಲ್ಲಿಸಿರುವ ವೈದ್ಯರಿದ್ದಾರೆ. ಖಾಯಂಗೊಳಿಸಬೇಕಾದರೆ ನಿಯಮಾವಳಿಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಇದನ್ನು ಸಂಘದ ಪದಾಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ.  ಈ ಹಿಂದೆಯೇ ಅವರ ಸೇವೆಯನ್ನು ಖಾಯಂಗೊಳಿಸಬೇಕೆಂಬ ಬೇಡಿಕೆಯನ್ನು ಇಡಲಾಗಿತ್ತು.

ಆದರೆ ಹಿಂದಿನ ಸರ್ಕಾರಗಳು ಇದನ್ನು ಪರಿಹರಿಸದ ಕಾರಣ ಸಮಸ್ಯೆ ಉಂಟಾಯಿತು. ನಮ್ಮ ಮುಖ್ಯಮಂತ್ರಿಯವರು ಈ ಹಿಂದೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು.ಪರಿಣಾಮ ಇಂದು 2000 ವೈದ್ಯರ ಸೇವೆ ಖಾಯಂಗೊಳ್ಳಲಿದೆ. ಒಂದು ತಿಂಗಳ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಯಾರೂ ಕೂಡ ಪ್ರತಿಭಟನೆ ಮಾಡದೆ ಕರ್ತವ್ಯಕ್ಕೆ ಹಾಜರಾಗುವಂತೆ ಕೋರಿದರು.

ಸಚಿವರ ಮನವಿಗೆ ಸ್ಪಂದಿಸಿದ ವೈದ್ಯರು ತಾವು ಪ್ರತಿಭಟನೆಯನ್ನು ಕೈಬಿಟ್ಟಿದ್ದು, ಮುಖ್ಯಮಂತ್ರಿ ಮತ್ತು ಸಚಿವರ ಮೇಲೆ ವಿಶ್ವಾಸವಿದೆ. ನಾಳೆಯಿಂದ ಎಲ್ಲರೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇವೆ ಎಂದು ವೈದ್ಯರು ತಿಳಿಸಿದರು.

ಇದಕ್ಕೂ ಮುನ್ನ ನೂರಾರು ವೈದ್ಯರು ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಕಾವೇರಿ ನಿವಾಸದ ಬಳಿ ಪ್ರತಿಭಟನೆ ನಡೆಸಲು ಮುಂದಾದರು.ತಕ್ಷಣವೇ ಅವರೆಲ್ಲರನ್ನು ಕುಮಾರಕೃಪ ಅತಿಥಿ ಗೃಹದ ಬಳಿ ಪೊಲೀಸರು ತಡೆದರು. ಬಳಿಕ ಆರೋಗ್ಯ ಸಚಿವ ಶ್ರೀರಾಮುಲು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿದರು.

Facebook Comments