ಮುಂದಿನ ವಾರ ರೈತರಿಗೆ ಬೆಳೆ ಸಾಲ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ 30 ಲಕ್ಷ ರೈತರಿಗೆ 20810 ಕೋಟಿ ರೂಪಾಯಿ ಬೆಳೆ ಸಾಲ ನೀಡುವಂತೆ ಗುರಿಯನ್ನು ನಿಗದಿಪಡಿಸಿದ್ದು, ಮುಂದಿನ ವಾರ ಲಾಕ್ಡೌನ್ ಮುಗಿಯುತ್ತಿದ್ದಂತೆ ದಿನಾಂಕ ನಿಯೋಜಿಸಿ ಬೆಂಗಳೂರಿನಲ್ಲಿ ಬಿಡಿಸಿಸಿ ಬ್ಯಾಂಕ್ ಮೂಲಕ ಸುಮಾರು 25 ಕೋಟಿ ರೂಪಾಯಿ ಬೆಳೆಸಾಲವನ್ನು ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಮೂಲಕ ಚಾಲನೆ ಕೊಡಿಸುತ್ತೇನೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ರಾಮೋಹಳ್ಳಿ ಗ್ರಾಮ ಪಂಚಾಯಿತಿಯ ರಾಮೋಹಳ್ಳಿ ಗ್ರಾಮದಲ್ಲಿನ ಕೃಷಿ ಸೇವಾ ಸಹಕಾರ ಪತ್ತಿನ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸಾಲ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವರು, ಮುಖ್ಯಮಂತ್ರಿಗಳು ಚಾಲನೆ ನೀಡಿದ ಬಳಿ 21 ಡಿಸಿಸಿ ಬ್ಯಾಂಕ್ ಗಳಿಗೂ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುವುದು. ಅಲ್ಲದೆ, ಈಗ ಮಳೆಗಾಲ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಸಾಲ ಸಿಕ್ಕವರಿಗೇ ಸಾಲ ಸಿಗುತ್ತದೆ, ಅಗತ್ಯವಿರುವವರಿಗೆ ಲಭಿಸುತ್ತಿಲ್ಲ ಎಂಬ ಮಾತುಗಳಿಗೆ ಅವಕಾಶ ಕೊಡದೇ ಎಲ್ಲರಿಗೂ ಸಾಲ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ನಬಾರ್ಡ್ ನಿಂದಲೂ ಸಹ ಹೆಚ್ಚುವರಿ ಅನುದಾನ ನೀಡುವಂತೆ ಕೇಳಿಕೊಳ್ಳಲಾಗಿದ್ದು, ರೈತರಿಗೆ ಅನುಕೂಲವಾಗುವಂತೆ ಕ್ರಮ ವಹಿಸಲಾಗುವುದು. ಎಪಿಎಂಸಿಗಳಿಗೆ ಸುಮಾರು 302 ಕೋಟಿ ರೂಪಾಯಿ ನೀಡುವಂತೆ ಸಹ ಮನವಿ ಮಾಡಲಾಗಿದೆ. ಎಲ್ಲ ರೀತಿಯಿಂದಲೂ ರೈತರಿಗೆ ಉಪಯೋಗವಾಗುವಂತೆ ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಏಕರೂಪ ತಂತ್ರಾಂಶದಿಂದ ಪಾರದರ್ಶಕತೆ; ಸಹಕಾರ ಸಚಿವರು
ಅಪೆಕ್ಸ್ ಬ್ಯಾಂಕ್, 21 ಡಿಸಿಸಿ ಬ್ಯಾಂಕ್ ಹಾಗೂ ಸುಮಾರು 5400 ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಗಳಿದ್ದು, ಪಾರದರ್ಶಕ ನೀತಿಯನ್ನು ಅಳವಡಿಸುವ ನಿಟ್ಟಿನಲ್ಲಿ ಏಕರೂಪ ತಂತ್ರಾಂಶವನ್ನು ಅಳವಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಸರ್ಕಾರ 90 ಕೋಟಿ ರೂಪಾಯಿ ಹಣವನ್ನು ಸಹ ಮೀಸಲಿಟ್ಟಿದೆ. ಇದು ಅನುಷ್ಠಾನಗೊಂಡರೆ ಕರ್ನಾಟಕದಾದ್ಯಂತ ರೈತರಿಗೆ ಎಷ್ಟು ಸಾಲ ನೀಡಲಾಗಿದೆ? ಅರ್ಹರಿಗೆ ಸರಿಯಾಗಿ ಸಾಲ ಲಭಿಸುತ್ತಿದೆಯೇ? ವಿತರಣೆ ಹೇಗೆ ಆಗುತ್ತಿದೆ ಎಂಬುದನ್ನು ಬೆಂಗಳೂರಿನಲ್ಲೇ ಕುಳಿತು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು.

# ಸಾಲ ಮರುಪಾವತಿ ಉತ್ತಮವಾಗಿದೆ; ಎಸ್ ಟಿ ಎಸ್
ಯಾವುದೇ ಒಬ್ಬ ರೈತರಿಗೂ ಸಾಲ ಇಲ್ಲ ಎಂಬ ಅಂಶ ಇರಕೂಡದು. ಎಲ್ಲರಿಗೂ ಸಾಲ ದೊರೆಯಬೇಕು ಎಂಬುದು ನಮ್ಮ ಉದ್ದೇಶವಾಗಿದ್ದು, ಹಾಕಿರುವ ಗುರಿ ಮೀರಿ ಸಾಧನೆ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ. ರೈತರಿಗೆ ಸಾಲ ನೀಡಿದರೆ ಅದು ಮರುಪಾವತಿಯಾಗುತ್ತದೆ. ಶೇಕಡಾ 90 ರಷ್ಟು ಸಾಲವು ಬೇಗನೇ ಮರುಪಾವತಿಯಾಗುತ್ತವೆ. ಇನ್ನು ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಸಂಘಗಳಿಗೆ ಸಾಲ ನೀಡಿದರೆ ಶೇ.100 ಮರುಪಾವತಿಯಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

# ಕಳೆದ ವರ್ಷ ಶೇ.114 ಸಾಧನೆ; ಎಸ್ ಟಿ ಎಸ್ ಸಂತಸ
ಕಳೆದ ವರ್ಷ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆಸಾಲವನ್ನು ವಿತರಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಈ ನಿಟ್ಟಿನಲ್ಲಿ 21 ಡಿಸಿಸಿ ಬ್ಯಾಂಕ್ ಗಳು ಉತ್ತಮ ಸಾಧನೆ ಮಾಡಿದ್ದು, 17,108 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡುವ ಮೂಲಕ ಶೇ. 114 ಸಾಧನೆ ಮಾಡಿದೆ ಎಂದು ಸಚಿವರು ತಿಳಿಸಿದರು.

# 126 ರೈತರಿಗೆ 1.45 ಕೋಟಿ ರೂಪಾಯಿ ಸಾಲ ವಿತರಣೆ
126 ರೈತರಿಗೆ 1.45 ಕೋಟಿ ರೂಪಾಯಿ ಕೃಷಿ ಸಾಲ ಹಾಗೂ 3 ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರೂಪಾಯಿಯಂತೆ ಒಟ್ಟು 15 ಲಕ್ಷ ರೂಪಾಯಿ ಸಾಲವನ್ನು ಈ ಸಂದರ್ಭದಲ್ಲಿ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ವಿತರಣೆ ಮಾಡಿದರು.

# ರೈತರಿಗಾಗಿ ನಾವು, ಜನರಿಗಾಗಿ ಸೇವೆ; ಎಸ್ ಟಿ ಎಸ್
ದೊಡ್ಡಬಿದರುಕಲ್ಲು ವಾರ್ಡ್ ಸಂಖ್ಯೆ 40ರಲ್ಲಿ ತಿಪ್ಪೇನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ರೈತರಿಂದ ನೇರವಾಗಿ ಖರೀದಿಸಿದ ಉತ್ತಮ ಗುಣಮಟ್ಟದ ತರಕಾರಿಗಳನ್ನು ದೊಡ್ಡಬಿದರಕಲ್ಲು ಭಾಗದ ಸಾರ್ವಜನಿಕರಿಗೆ ಉಚಿತವಾಗಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ವಿತರಿಸಿದರು.

ಬಳಿಕ ಮಾತನಾಡಿದ ಸಚಿವರು, ಇಂದು ರೈತರು ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಆದರೆ, ಅದಕ್ಕೆ ಉತ್ತಮ ದರ ಲಭಿಸುತ್ತಿಲ್ಲ. ಹೆಚ್ಚಿನವು ಮಧ್ಯವರ್ತಿಗಳ ಪಾಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಈಗ ಮಾರಾಟವೂ ಕಷ್ಟವಾಗಿದೆ. ಇಂಥ ಸಮಸ್ಯೆಗಳನ್ನು ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಪರಿಹರಿಸುವ ಪ್ರಯತ್ನವನ್ನು ಮಾಡಿದ್ದೇವೆ. ರೈತರಿಂದ ತರಕಾರಿಗಳನ್ನು ನೇರವಾಗಿ ಖರೀದಿಸಿ, ಅಗತ್ಯವಿರುವ ನಾಗರಿಕರಿಗೆ ಉಚಿತವಾಗಿ ಹಂಚುವ ಕೆಲಸವನ್ನು ಮಾಡಿದ್ದೇವೆ ಎಂದು ತಿಳಿಸಿದರು.

# ವಿವಿಧೆಡೆ ದಿನಸಿ ಕಿಟ್ ವಿತರಣೆ :
ಹೇರೋಹಳ್ಳಿ ವಾರ್ಡ್ ಸಂಖ್ಯೆ 72ರ ವ್ಯಾಪ್ತಿಯ ಮಾರುತಿನಗರ, ಗಿಡದಕೊನೆಹಳ್ಳಿ, ಮುದ್ದನಪಾಳ್ಯ ಭಾಗದ ಸಾರ್ವಜನಿಕರಿಗೆ ರೇಶನ್ ಕಿಟ್ ಹಾಗೂ ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು. ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗನಹಳ್ಳಿ ಗ್ರಾಮದಲ್ಲಿ ಹಾಗೂ ರಾಮೋಹಳ್ಳಿ ಗ್ರಾಮ ಪಂಚಾಯಿತಿಯ ರಾಮೋಹಳ್ಳಿ ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.

Facebook Comments

Sri Raghav

Admin