ರಾಜ್ಯದ ಕೊರೊನಾ ನಿಯಂತ್ರಣ ಕ್ರಮಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23- ಕೊರೊನಾ ನಿಯಂತ್ರಣ ವಿಚಾರದಲ್ಲಿ ಭಾರತದಲ್ಲಿ ಸಕಾಲಿಕ ಕ್ರಮ ಕೈಗೊಂಡಿರುವುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವಿಧಾನಸಭೆಗೆ ತಿಳಿಸಿದರು.

ನಿಯಮ 69ರ ಅಡಿ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರರು ಕೊರೊನಾ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಆರೋಗ್ಯ ಸಂಬಂಧಿ ಸಾಮಗ್ರಿಗಳು ಮತ್ತು ಔಷಧಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು,

ಕೋವಿಡ್ ನಿರ್ವಹಣೆಯಲ್ಲಿ ವೈದ್ಯರು ಸೇರಿದಂತೆ ಎಲ್ಲರೂ ಸರಿಯಾದ ಕೆಲಸ ಮಾಡಿದ್ದರಿಂದ ಸಾವಿನ ಪ್ರಮಾಣ ಶೇ.1.54ಕ್ಕೆ ನಿಗ್ರಹ ಮಾಡಲು ಸಾಧ್ಯವಾಯಿತು. ಫೆಬ್ರವರಿ ಮೂರನೇ ವಾರದಿಂದಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಂದರಿನಲ್ಲಿ ಪ್ರಯಾಣಿಕರ ಸ್ಕ್ರೀನಿಂಗ್ ಮಾಡಲಾಯಿತು.

ರಾಜ್ಯದಲ್ಲಿ 3200 ಆಕ್ಸಿಜನ್ ಹೊಂದಿದ್ದ ಹಾಸಿಗೆಗಳು ಇದ್ದವು, ಆರು ತಿಂಗಳಲ್ಲಿ ಅವುಗಳನ್ನು 19,455 ಹಾಸಿಗೆಗಳಿಗೆ ಹೆಚ್ಚಳ ಮಾಡಿದ್ದೇವೆ. ಅಕ್ಟೋಬರ್ ವೇಳೆಗೆ 31 ಸಾವಿರ ಹಾಸಿಗೆಗಳಿಗೆ ಆಕ್ಸಿಜನ್ ಅಳವಡಿಕೆ ಮಾಡಲಾಗುವುದು ಎಂದರು.

ಅತಿಯಾದ ವಿಶ್ವಾಸದಿಂದ ಸರ್ಕಾರ ಮೈ ಮರೆತಿದೆ ಎಂಬ ಆರೋಪ ಸರಿಯಲ್ಲ. ಕಳೆದ 7 ತಿಂಗಳಿನಿಂದ ಒಂದು ದಿನವೂ ರಜೆ ಹಾಕದೆ ಕೆಲಸ ಮಾಡುತ್ತಿರುವ ನೌಕರರು ಇದ್ದಾರೆ. ಇಬ್ಬರು ಸಂಪುಟ ದರ್ಜೆ ಸಚಿವರು, ಮಾಜಿ ರಾಷ್ಟ್ರಪತಿ, ಹಲವು ಶಾಸಕರಿಗೆ ಸೋಂಕು ತಗುಲಿದೆ.

ಕೋವಿಡ್ ವಿರುದ್ಧದ ಯುದ್ಧ ನಡೆಯುತ್ತಿದ್ದು, ಇನ್ನೂ ಮುಗಿದಿಲ್ಲ. ರೋಗದ ಪ್ರಭಾವ ಇನ್ನೂ ಅರ್ಥವಾಗಿಲ್ಲ.  ನಮ್ಮ ದೇಶದಲ್ಲಿ ಪ್ರತಿ ಚದರ ಕಿ.ಮೀ.ಗೆ 454 ಜನ ವಾಸಿಸುತ್ತಿದ್ದಾರೆ. ಅಮೆರಿಕದಲ್ಲಿ 65 ಜನ ಇದ್ದಾರೆ. ಹೀಗಾಗಿ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿಯೇ ಲಾಕ್‍ಡೌನ್ ತೀರ್ಮಾನವನ್ನು ಕೈಗೊಂಡಿದ್ದರು. ಜೂನ್ ಅಂತ್ಯದವರೆಗೆ ರಾಜ್ಯದಲ್ಲಿ 15 ಸಾವಿರ ಕೋವಿಡ್ ಪ್ರಕರಣಗಳು ಮಾತ್ರ ದೃಢಪಟ್ಟಿದ್ದವು. ಆ ನಂತರ ಗಣನೀಯವಾಗಿ ಏರಿಕೆಯಾಗುತ್ತಾ ಬಂದಿದೆ. ಇತರೆ ರಾಜ್ಯ ಹಾಗೂ ದೇಶಗಳಲ್ಲೂ ಸೋಂಕು ಹೆಚ್ಚಾಗಿದೆ.  ಕರ್ನಾಟಕ ಆರು ರಾಜ್ಯಗಳ ನಡುವೆ ಇದೆ.

ಹೊರ ರಾಜ್ಯಗಳಿಂದ ಹೆಚ್ಚು ಸೋಂಕಿತರು ರಾಜ್ಯಕ್ಕೆ ಮರಳಿದ್ದರು. ಊರುಗಳಿಗೆ ತೆರಳುವ ವಲಸೆ ಕಾರ್ಮಿಕರು ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಹೋಗುವ ಕಾರ್ಮಿಕರಿಗೆ ವಿಶೇಷ ರೈಲು, ಬಸ್ ವ್ಯವಸ್ಥೆ ಮಾಡಲಾಗಿತ್ತು. ಕಾರ್ಮಿಕರಿಗೆ ಉಪಹಾರ ಹಾಸ್ಟೆಲ್ ಕ್ವಾರಂಟೈನ್ ಮಾಡಿದ್ದೆವು. ಕಾರ್ಮಿಕರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದು, ಕೇಂದ್ರ ಸರ್ಕಾರದ ಅನುದಾನ ಹೊರತುಪಡಿಸಿ ರಾಜ್ಯ ಸರ್ಕಾರ 2300 ಕೋಟಿ ರೂ. ನೀಡಿದೆ. ಪೂರ್ವ ಸಿದ್ಧತೆಮಾಡಿಕೊಳ್ಳಲು ಇದು ಯಾವುದೇ ಯೋಜನೆಯಲ್ಲ ಎಂದು ತಿರುಗೇಟು ನೀಡಿದರು.

Facebook Comments