ಹೊಸ ವರ್ಷಕ್ಕೆ ಕೊರೋನಾ ಲಸಿಕೆ ಲಭ್ಯ, ವಿತರಣೆ ಕುರಿತು ಮಹತ್ವದ ಮಾಹಿತಿ ನೀಡಿದ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.27- ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ರೊಗಕ್ಕೆ 2021ರ ಜನವರಿಯಲ್ಲಿ ಲಸಿಕೆ ಸಿಗುವ ಸಂಭವವಿದೆ ಎಂಬ ಆಶಾಭಾವನೆ ಸರ್ಕಾರದಿಂದ ವ್ಯಕ್ತವಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಹೊಸ ವರ್ಷದ ಪ್ರಾರಂಭದಲ್ಲಿ ಕೊರೊನಾ ಮಾರಿಗೆ ಲಸಿಕೆ ಸಿಗುವ ನಿರೀಕ್ಷೆಯಿದ್ದು, 2 ಮತ್ತು 3ನೇ ಹಂತದಲ್ಲಿ ನಡೆಯುವ ಪ್ರಯೋಗಗಳ ಮೇಲೆ ಅವಲಂಬಿತವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ವಿಧಾನಸಸೌಧಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಆಕ್ಸಫರ್ಡ್ ವಿವಿಯು ಆಸ್ಟ್ರಾಜನಿಕ ಸಂಸ್ಥೆಯೊಂದಿಗೆ ಸಂಶೋಧನೆ ನಡೆಸುತ್ತಿದೆ. ಈಗಾಗಲೇ ದೇಶದಲ್ಲಿ ಒಟ್ಟು 1,600 ಮಂದಿಗೆ ಪ್ರಯೋಗ ನಡೆಸಿದ್ದೇವೆ. ಇದು ಯಶಸ್ವಿಯಾಗಿದ್ದು ಹೊಸ ವರ್ಷದ ಪ್ರಾರಂಭದಲ್ಲಿ ಲಸಿಕೆ ಸಿಗುವ ನಿರೀಕ್ಷೆಯಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಮೈಸೂರಿನ ಜೆಎಸ್‍ಎಸ್ ಸಂಸ್ಥೆಯಲ್ಲಿ ಪ್ರಾಯೋಗಿಕವಾಗಿ ಲಸಿಕೆಯನ್ನು ನೀಡುತ್ತಿದ್ದಾರೆ. ಪುಣೆಯ ಸೀರಂ ಸಂಸ್ಥೆಯೊಂದಿಗೂ ಒಪ್ಪಂದ ಮಾಡಿಕೊಂಡಿದ್ದೇವೆ. ಕೇಂದ್ರ ಸರ್ಕಾರವು ಆಸ್ಟ್ರಾಜನಿಕ ಸಂಸ್ಥೆಗೆ ಅನುಮತಿ ನೀಡಿರುವುದರಿಂದ ಮೊದಲ ಹಂತದ ಪ್ರಯೋಗ ನಡೆದಿದೆ. 100 ಕೋಟಿ ಜನರಿಗೆ ಲಸಿಕೆ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

ಆಸ್ಟ್ರಾಜನಿಕ ಸಂಸ್ಥೆಯವರು ಪಿಪಿಟಿಯಲ್ಲಿ ನಡೆಸಿರುವ ಮೊದಲ ಹಂತದ ಚಿಕಿತ್ಸೆ ಯಶಸ್ವಿಯಾಗಿದೆ. ದೇಶದಲ್ಲಿ ಸದ್ಯಕ್ಕೆ 1600 ಮಂದಿಗೆ ಲಸಿಕೆ ನೀಡಿರುವ ಪ್ರಯೋಗವೂ ಯಶಸ್ವಿಯಾಗಿದೆ. 5 ವರ್ಷದಿಂದ ವಯೋವೃದ್ಧರೂ ಸೇರಿದಂತೆ ಎಲ್ಲಾ ವಯೋಮಾನದವರಿಗೆ ಲಸಿಕೆ ನೀಡುವ ಪ್ರಯೋಗ ಮಾಡಲಾಗುತ್ತಿದೆ ಎಂದರು.

ಮೊದಲ ಹಂತದಲ್ಲಿ ಕೊರೊನಾ ಪಾಸಿಟಿವ್ ಬಾರದೆ ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. 2 ಮತ್ತು 3ನೇ ಹಂತದಲ್ಲಿ ಕೊರೊನಾ ಪಾಸಿಟಿವ್ ಬಂದವರಿಗೆ ಲಸಿಕೆ ನೀಡುತ್ತೇವೆ. ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಎಂಬುದರ ಮೇಲೆ ಮುಂದಿನ ತೀರ್ಮಾನಗಳು ನಿರ್ಧಾರವಾಗಲಿದೆ ಎಂದು ಹೇಳಿದರು.

Facebook Comments