ಕರೋನ ಭೀತಿ : ಗುಂಪು ಗುಂಪಾಗಿ ಸೇರದಂತೆ ಸಾರ್ವಜನಿಕರಲ್ಲಿ ಸಚಿವ ಸುಧಾಕರ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.10- ರಾಜ್ಯದಲ್ಲಿ ಕೊರೋನ ವೈರಸ್ ಹಬ್ಬಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ಸೇರದೆ ಕೆಲ ದಿನಗಳ ಮಟ್ಟಿಗೆ ಅಂತರ ಕಾಯ್ದುಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.  ಕೊರೋನ ವೈರಸ್ ಸೋಂಕು ಗಾಳಿಯಲ್ಲಿ ಹಬ್ಬುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜನರು ಗುಂಪು ಗುಂಪಾಗಿ ಸೇರದೆ ಪ್ರತ್ಯೇಕವಾಗಿರುವುದೇ ಆರೋಗ್ಯದ ದೃಷ್ಟಿಯಿಂದ ಒಳಿತು ಎಂದು ಸಲಹೆ ಮಾಡಿದ್ದಾರೆ.

ಗುಂಪು ಗುಂಪು ಸೇರಿದರೆ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಒಳಿತು. ನಿಮ್ಮ ಮನೆಗೆ ಯಾರೇ ಬಂದರೂ ಹಸ್ತ ಲಾಘವದ ಬದಲು ಕೈ ಮುಗಿದು ನಮಸ್ಕರಿಸುವುದೇ ಉತ್ತಮ ಎಂದು ಕಿವಿಮಾತು ಹೇಳಿದ್ದಾರೆ. ಗುಂಪಾಗಿ ಸೇರಿದಾಗ ರೋಗದ ಲಕ್ಷಣ ಇರುವ ವ್ಯಕ್ತಿ ಬೆವರಿನಿಂದಲೂ ಕೊರೋನ ರೋಗ ಹಬ್ಬಬಹುದು. ಈ ಕಾರಣಕ್ಕಾಗಿ ಗುಂಪು ಸಮಾರಂಭಗಳಲ್ಲಿ ಭಾಗಿಯಾಗುವುದನ್ನು ಮುಂದೂಡಬೇಕೆಂದು ಜನತೆಯಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.

ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದರಿಂದ ವೈರಸ್‍ನಿಂದಲೂ ಪಾರಾಗಬಹುದು. ವಿದೇಶದಿಂದ ಬರುವವರನ್ನು ತಪಾಸಣೆಗೆ ಒಳಪಡಿಸಿದ್ದೇವೆ. ಶಂಕಿತರಿಗೆ 21 ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ. ಮಾಂಸ ಸೇವನೆಯಿಂದ ಈ ಸೋಂಕು ತಗುಲುವುದಿಲ್ಲ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಸಚಿವರು ಮನವಿ ಮಾಡಿದ್ದಾರೆ.

Facebook Comments