ಲಸಿಕೆ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.22- ವೈದ್ಯಕೀಯ ಪರಿಣಿತರ ವರದಿ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ ಶಾಲಾ-ಕಾಲೇಜು ಆರಂಭಕ್ಕೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂತ ಹಂತವಾಗಿ ಶಾಲಾ-ಕಾಲೇಜು ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಈಗಾಗಲೇ ವೈದ್ಯಕೀಯ ಕಾಲೇಜುಗಳು ಆರಂಭವಾಗಿವೆ. ಪದವಿ, ಎಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಪಿಯುಸಿ ಹಾಗೂ ಪ್ರೌಢಶಾಲೆ ಆರಂಭದ ಬಗ್ಗೆ ಮುಖ್ಯಮಂತ್ರಿಯವರ ಜತೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲಾಗುವುದು. ವೈಜ್ಞಾನಿಕ ನೆಲೆಗಟ್ಟಿನಲ್ಲೇ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.

ಯಾವೊತ್ತೋ ಒಂದು ದಿನ ಶಾಲೆ ಆರಂಭ ಮಾಡಲೇಬೇಕಿದೆ. ಆನ್‍ಲೈನ್ ಮೂಲಕ ಮಕ್ಕಳು ಖಾಯಂ ಆಗಿ ಪಾಠ ಕೇಳಲು ಸಾಧ್ಯವಾಗುವುದಿಲ್ಲ. ಆನ್‍ಲೈನ್ ಪಾಠ ಕೇಳುತ್ತಿರುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಪಾಯವಿದೆ. ಎಲ್ಲವನ್ನೂ ಅಳೆದು-ತೂಗಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಶಾಲಾ ಸಿಬ್ಬಂದಿಯನ್ನು ವಿಶೇಷ ಗುಂಪೆಂದು ಪರಿಗಣಿಸಿ ಆದ್ಯತೆ ಮೇಲೆ ಕೋವಿಡ್ ಲಸಿಕೆ ನೀಡಲಾಗುವುದು. ಈಗಾಗಲೇ ಮಕ್ಕಳ ಪೋಷಕರಿಗೂ ಲಸಿಕೆ ನೀಡಲಾಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ರಾಜ್ಯದಲ್ಲಿ ಮೂರು ಕೋಟಿ ಜನರಿಗೆ ಲಸಿಕೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.

ಕೋವಿಡ್ ಪಾಸಿಟಿವ್ ಬಂದವರಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ. ಹೀಗಾಗಿ ಶಾಲಾ-ಕಾಲೇಜು ಆರಂಭದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದ ಅವರು, ಪ್ರತಿ ದಿನವೂ ಕೋವಿಡ್ ಪಾಸಿಟಿವ್ ಬಂದ ಶೇ.5ರಷ್ಟನ್ನು ಜಿನೋವಿಕ್ ಸೀಕ್ವೆನ್ಷ್‍ಗೆ ಕಳುಹಿಸಲಾಗುತ್ತಿದೆ. ಡೆಲ್ಟಾ, ಡಲ್ಟಾ+ ಹಾಗೂ ಹೊಸ ಸ್ವರೂಪ ಬರುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಮಾಹಿತಿಯನ್ನು ಐಸಿಎಂಆರ್ ಜತೆ ಹಂಚಿಕೊಳ್ಳಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಬಿಜೆಪಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಿರುವುದಾಗಿ ಅವರು ತಿಳಿಸಿದರು. ಇದಕ್ಕೂ ಮುನ್ನ ಟ್ವಿಟ್ ಮಾಡಿದ ಅವರು, ಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಶಾಲಾ ಆವರಣದಲ್ಲೇ ಕೋವಿಡ್ ಲಸಿಕೆ ನೀಡುವ ಶಿಬಿರವನ್ನು ಆಯೋಜಿಸುವುದಾಗಿ ಹೇಳಿದ್ದರು. ಫಲಾನುಭವಿಗಳ ಸಂಖ್ಯೆ ಮತ್ತು ಲಸಿಕೆಯ ಲಭ್ಯತೆ ಆಧರಿಸಿ ಆಯಾ ಶಾಲೆಗಳ ಆವರಣದಲ್ಲೇ ಲಸಿಕಾ ಶಿಬಿರವನ್ನು ಆಯೋಜಿಸಲಾಗುವುದು ಎಂದಿದ್ದರು.

ಮಕ್ಕಳ ಕಲಿಕೆ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳ್ನು ಆದಷ್ಟು ಶೀಘ್ರವಾಗಿ ಪುನರಾರಂಭಿಸುವ ನಿಟ್ಟನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಲು ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದ್ದರು.

ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕ್ರಿಯಾ ಯೋಜನೆ ರೂಪಿಸಲು ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತಗಳ ಜತೆಗೆ ಸಮನ್ವಯದೊಂದಿಗೆ ಕಾರ್ಯೋನ್ಮುಖವಾಗಲಿದೆ ಎಂದು ಅವರು ತಿಳಿಸಿದ್ದರು.

Facebook Comments