ಐಐಎಸ್‍ಸಿ ನಿರ್ದೇಶಕರ ಜೊತೆ ಸಚಿವ ಸುಧಾಕರ್ ಮಾತುಕತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 13-ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಹಯೋಗದಲ್ಲಿ ಕಾರ್ಯನಿರ್ವಹಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಐಐಎಸ್‍ಸಿ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಜೊತೆ ಚರ್ಚೆ ನಡೆಸಿದರು.

30 ಡಿಗ್ರಿ ಸೆಲ್ಸಿಯಸ್ ತಾಪಮಾನದದಲ್ಲೂ ದಾಸ್ತಾನು ಮಾಡಬಹುದಾದ ಲಸಿಕೆ, ಹೆಚ್ಚು ದಕ್ಷತೆಯಿಂದ ಕೂಡಿರುವ ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿದಂತೆ ಕೋವಿಡ್ ವಿರುದ್ಧ ಹೋರಾಟಕ್ಕೆ ಅಗತ್ಯವಾದ ಆವಿಷ್ಕಾರಗಳನ್ನು ಐಐಎಸ್ ಸಿ ವಿಜ್ಞಾನಿಗಳು ನಡೆಸುತ್ತಿರುವ ಕುರಿತು ಪ್ರೊ.ರಂಗರಾಜನ್ ಸಚಿವರಿಗೆ ವಿವರಿಸಿದರು.

10 ಎಲ್ ಪಿಎಂ ಸಾಮರ್ಥ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಐಐಎಸ್ ಸಿ ಅಭಿವೃದ್ಧಿಪಡಿಸಿದ್ದು, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಕ್ಲಿನಿಕಲ್ ಪರೀಕ್ಷೆ ನಡೆಸಲಾಗಿದೆ. ಚೈನೀಸ್ ಕಾನ್ಸಂಟ್ರೇಟರ್ ಗಳು ಶೇ.40-50 ಆಕ್ಸಿಜನ್ ನೀಡುತ್ತಿದ್ದರೆ, ಐಐಎಸ್ ಸಿಯ ಕಾನ್ಸಂಟ್ರೇಟರ್ ಗಳು ಶೇ. 90ರಷ್ಟು ಆಕ್ಸಿಜನ್ ನೀಡುತ್ತವೆ.

ಹೆಚ್ಚು ದಕ್ಷತೆಯಿಂದ ಕೂಡಿರುವ ಈ ಕಾನ್ಸಂಟ್ರೇಟರ್ ನ ಕ್ಲಿನಿಕಲ್ ಪರೀಕ್ಷೆಗೆ ಹಾಗೂ ತುರ್ತು ಬಳಕೆಗೆ ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‍ಸಿಒ) ನಿಂದ ಅನುಮೋದನೆ ದೊರೆಯಲು ಸಹಕರಿಸಬೇಕು ಎಂದು ಪ್ರೊ.ರಂಗರಾಜನ್ ಸಚಿವರಿಗೆ ಮನವಿ ಮಾಡಿದರು.

ಈ ಬಗ್ಗೆ ಭರವಸೆ ನೀಡಿದ ಸಚಿವ ಡಾ.ಕೆ.ಸುಧಾಕರ್, ಈ ಆವಿಷ್ಕಾರದ ಕುರಿತು ಆರ್ ಜಿಯುಎಚ್‍ಎಸ್ ಕುಲಪತಿಯವರೊಡನೆ ಚರ್ಚಿಸಲಾಗುವುದು ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಪ್ರೊ.ರಂಗರಾಜನ್ ಅವರು, ಸಂಸ್ಥೆಯಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕೆ ಅಭಿವೃದ್ಧಿ ಕುರಿತು ವಿವರಿಸಿದರು. ಇದು ಹೆಚ್ಚು ನ್ಯೂಟ್ರಲೈಜ್ ಆಗಿರುವ ಲಸಿಕೆಯಾಗಿದ್ದು, ಮಾನವ ದೇಹದ ಮೇಲಿನ ಪ್ರಯೋಗ ಇನ್ನಷ್ಟೇ ಆರಂಭವಾಗಬೇಕಿದೆ.

30 ಡಿಗ್ರಿ ಸೆಲ್ಸಿಯಸ್ ಕೊಠಡಿ ತಾಪಮಾನದಲ್ಲೂ ಸಂಗ್ರಹಿಸಬಹುದಾದ ಗುಣ ಹೊಂದಿರುವ ಈ ಲಸಿಕೆ ಭಾರತದಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಒಂದು ಮೈಲಿಗಲ್ಲಾಗಲಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಲಸಿಕೆ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಸರ್ಕಾರ ಈ ಲಸಿಕೆಯನ್ನು ವೇಗವಾಗಿ ಹಾಗೂ ಬಹಳ ಸುಲಭವಾಗಿ ವಿತರಿಸಬಹುದಾಗಿದೆ.

ಆಕ್ಸಿಜನ್ ಜನರೇಟರ್ ಘಟಕ: ಕೈಗಾರಿಕಾ ಘಟಕ ಹಾಗೂ ಆಸ್ಪತ್ರೆಗಳಲ್ಲಿ ಆಕ್ಸಿಜನ್ ತುಂಬಿಸುವಾಗ ವ್ಯರ್ಥವಾಗುವುದನ್ನು ಕಡಿಮೆ ಮಾಡುವುದು ಮತ್ತು ಲಭ್ಯವಿರುವ ಆಕ್ಸಿಜನ್ ಅನ್ನು ಬೇಡಿಕೆಗೆ ತಕ್ಕಷ್ಟೇ ಸಮರ್ಪಕವಾಗಿ ಬಳಸುವ ಕುರಿತು ಸೂಕ್ತ ತಾಂತ್ರಿಕ ಸಲಹೆ ನೀಡಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಕೋರಿದರು.

ಈ ಸಮಸ್ಯೆ ಪರಿಹರಿಸಲು ಎಲ್ಲ ಬಗೆಯ ತಾಂತ್ರಿಕ ಸಹಕಾರ ಹಾಗೂ ಎಂಜಿನಿಯರಿಂಗ್ ನೆರವು ನೀಡಲಾಗುವುದು ಎಂದು ಪ್ರೊ.ರಂಗರಾಜನ್ ಆಶ್ವಾಸನೆ ನೀಡಿದರು.

Facebook Comments

Sri Raghav

Admin