ನಟಿ ಸುಧಾರಾಣಿ ಸಂಬಂಧಿಕರಿಗೆ ಚಿಕಿತ್ಸೆ ನೀಡದ ಅಪೊಲೋ ಆಸ್ಪತ್ರೆಗೆ ಸಚಿವ ಸುಧಾಕರ್ ವಾರ್ನಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.28- ಚಿತ್ರನಟಿ ಸುಧಾರಾಣಿ ಸಂಬಂಧಿಕರಿಗೆ ಚಿಕಿತ್ಸೆ ನೀಡದೆ ಮೀನಾಮೇಷ ಎಣಿಸಿದ ಅಪೊಲೋ ಆಸ್ಪತ್ರೆ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸುಧಾರಾಣಿ ಅವರ ಸಹೋದರನ ಮಗಳಿಗೆ ಶೇಷಾದ್ರಿಪುರಂನಲ್ಲಿರುವ ಅಪೊಲೋ ಆಸ್ಪತ್ರೆ ಚಿಕಿತ್ಸೆ ನೀಡಲು ತಡಮಾಡಿರುವುದು ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ.

ಹೀಗಾಗಿ ಆಸ್ಪತ್ರೆ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಕೇವಲ ಸುಧಾರಾಣಿ ಮಾತ್ರವಲ್ಲ. ಸಾಮಾನ್ಯ ವ್ಯಕ್ತಿ ಯಾರೇ ಆಗಲಿ ಚಿಕಿತ್ಸೆಗೆ ಪರದಾಡಬಾರದು. ಆ ಖಾಸಗಿ ಆಸ್ಪತ್ರೆ ಮೇಲೆ ಶಿಸ್ತುಕ್ರಮ ಜರುಗಿಸುವುದಾಗಿ ಸುಧಾಕರ್ ಟ್ವಿಟರ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಳೆದ ರಾತ್ರಿ ಸುಧಾರಾಣಿ ಅವರ ಸಹೋದರನ ಮಗಳಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅಪೊಲೋ ಆಸ್ಪತ್ರೆಗೆ ಧಾವಿಸಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿ ಅವರಿಗೆ ಸಕಾಲಕ್ಕೆ ಸರಿಯಾಗಿ ಚಿಕಿತ್ಸೆ ನೀಡದೆ ಸುಮಾರು ಹೊತ್ತು ಆಸ್ಪತ್ರೆ ಹೊರಗಡೆ ಕಾಯುವಂತೆ ಮಾಡಿದ್ದರು.

ಕೊನೆಗೆ ಖುದ್ದು ಸುಧಾರಾಣಿ ಅವರೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್‍ಗೆ ದೂರವಾಣಿ ಕರೆ ಮಾಡಿ ಆಸ್ಪತ್ರೆ ವಿರುದ್ಧ ದೂರು ನೀಡಿದ್ದರು. ನಂತರ ಆಯುಕ್ತರ ಸೂಚನೆ ಮೇರೆಗೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸುಧಾರಾಣಿ ಅವರು, ಕಿಡ್ನಿಸ್ಟೋನ್‍ನಿಂದ ಬಳಲುತ್ತಿದ್ದ ಯುವತಿಯನ್ನು ಸೌಜನ್ಯಕ್ಕೂ ಚೆಕ್ ಮಾಡದೇ ವೆಂಟಿಲೇಟರ್ ಮತ್ತು ಬೆಡ್‍ಗಳಿಲ್ಲ ಅಂತ ಗಂಟೆಗಳ ಕಾಲ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಿದ್ದಾರೆ.

ಪ್ರಥಮ ಚಿಕಿತ್ಸೆಯಾದರೂ ನೀಡಿ ಎಂದರೇ ವೆಂಟಿಲೇಟರ್ ಇಲ್ಲ, ಬೆಡ್ ಇಲ್ಲ ಎಂಬುದನ್ನೇ ಹೇಳುತ್ತಾರೆ. ವೈದ್ಯರೇ ಹೀಗೆ ಮಾಡಿದರೆ ಸಾಮಾನ್ಯ ಜನರಿಗೆ ಯಾವ ಸ್ಥಿತಿ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿತ್ತು.

Facebook Comments

Sri Raghav

Admin