ಭರಚುಕ್ಕಿ ಜಲಪಾತದ ಬಳಿ 100ಕೋಟಿ ವೆಚ್ಚದಲ್ಲಿ ಜೈವಿಕ ಉದ್ಯಾನವನ 

ಈ ಸುದ್ದಿಯನ್ನು ಶೇರ್ ಮಾಡಿ
ಕೊಳ್ಳೆಗಾಲ,ನ.5- ವಿಶ್ವವಿಖ್ಯಾತ  ಪ್ರವಾಸಿ ತಾಣವಾದ ಭರಚುಕ್ಕಿ ಜಲಪಾತದ ಬಳಿ 100 ಕೋಟಿ ವೆಚ್ಚದಲ್ಲಿ ಜೈವಿಕ ಉದ್ಯಾನವನ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ  ಸುರೇಶ್‌ಕುಮಾರ್ ತಿಳಿಸಿದರು.  ಇಂದು ಬೆಳಗ್ಗೆ ಭರಚುಕ್ಕಿ ಜಲಪಾತ ವೀಕ್ಷಿಸಿ ಮಾತನಾಡಿದ ಅವರು, ಸುಮಾರು 150ಎಕರೆ ವಿಶಾಲ ಪ್ರದೇಶದಲ್ಲಿ ಜೈವಿಕ ಉದ್ಯಾನವನ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಡಿಸೆಂಬರ್‌ನಲ್ಲಿ ಗುದ್ದಲಿ ಪೂಜೆ ನೆರವೇರಿಸಿ 2020ರ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದರು.  ಇಲ್ಲಿ ಆಡಿಟೋರಿಯಂ, ಸಣ್ಣಪುಟ್ಟ ಉದ್ಯಾನವನಗಳನ್ನು ಒಳಗೊಂಡಂತೆ ಜೈವಿಕ ಉದ್ಯಾನವನ್ನು ನಿರ್ಮಿಸುವ ಯೋಜನೆ ಇದೆ. ಎಲ್ಲ ರೀತಿಯಲ್ಲೂ ಸುಸಜ್ಜಿತವಾಗಿ ಉದ್ಯಾನವನ ನಿರ್ಮಾಣಗೊಳ್ಳಲಿದೆ ಎಂದು  ಹೇಳಿದರು.
ಪ್ರಸಿದ್ಧ  ಪ್ರವಾಸಿ ತಾಣವಾದ ಈ ಸ್ಥಳವನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದಲೇ ಯೋಜನೆ  ಕೈಗೊಳ್ಳಲಾಗಿದೆ. ಪ್ರತಿ ವರ್ಷ ನಡೆಯುವ ಜಲಪಾತೋತ್ಸವವನ್ನು ಈ ಬಾರಿ ನಡೆಸಲು ದಿನಾಂಕ ನಿಗದಿಗೆ ಇಂದು ಸಂಜೆ ಜಿಲ್ಲಾ ಶಾಸಕರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು. ಇದಕ್ಕೂ ಮುನ್ನ ಅರಣ್ಯಾಧಿಕಾರಿ ಏಡು ಕುಂಡಲ ಅವರೊಂದಿಗೆ ಚರ್ಚೆ ನಡೆಸಿದರು. ನಂತರ ರಂಗನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಂಡ್ಯಕ್ಕೆ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಶಾಸಕ ನರೇಂದ್ರ, ಜಿಲ್ಲಾಧಿಕಾರಿ ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಂದ್‌ಕುಮಾರ್, ಡಿವೈಎಸ್ಪಿ  ನವೀನ್‌ಕುಮಾರ್, ಉಪವಿಭಾಗಾಧಿಕಾರಿ ಲಿಖಿತ ಚಿನ್ನಸ್ವಾಮಿ, ತಹಸೀಲ್ದಾರ್ ಕೆ.ಕುನಾಲ್  ಮತ್ತಿತರರು ಉಪಸ್ಥಿತರಿದ್ದರು.
Facebook Comments