ಸೂರ್ಯನಗರ 4ನೇ ಹಂತದ ಅತಿ ದೊಡ್ಡ ವಸತಿ ಬಡಾವಣೆಗೆ ಹಸಿರು ನಿಶಾನೆ

ಈ ಸುದ್ದಿಯನ್ನು ಶೇರ್ ಮಾಡಿ

ಸೆಪ್ಟಂಬರ್ 3, ಬೆಂಗಳೂರು: ಸೂರ್ಯನಗರ 4ನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಅತಿ ದೊಡ್ಡ ‘ಪ್ರಧಾನ ಮಂತ್ರಿಗಳ ವಸತಿ ಬಡಾವಣೆ” ನಿರ್ಮಾಣ ಕಾರ್ಯಕ್ಕೆ ಸಚಿವ ಸಂಪುಟದ ಸಭೆಯಲ್ಲಿ ಹಸಿರು ನಿಶಾನೆ ದೊರಕಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಸಚಿವ ಸೋಮಣ್ಣನವರು 2008-13ರ ಅವಧಿಯಲ್ಲಿ ವಸತಿ ಸಚಿವರಾಗಿದ್ದಾಗ ಸೂರ್ಯನಗರ 4ನೇ ಹಂತದ ಟೌನ್‍ಶಿಪ್ ನಿರ್ಮಾಣಕ್ಕಾಗಿ 2013ರಲ್ಲಿ ಭೂಸ್ವಾಧೀನದ ಪ್ರಾಥಮಿಕ ಅಧಿಸೂಚನೆ ಹೊರಬಿದ್ದಿದ್ದರೂ ಜಮೀನು ಸಂಗ್ರಹ ಕಗ್ಗಂಟಾಗಿ ಪರಿಣಮಿಸಿ 1938 ಎಕರೆ ಪ್ರದೇಶದಲ್ಲಿ 30,000 ನಿವೇಶನಗಳನ್ನು ಅಭಿವೃದ್ಧಿಪಡಿಸುವ ಪ್ರತಿಷ್ಠಿತ ಯೋಜನೆ ಕುಂಠಿತಗೊಂಡಿತ್ತು.

ಪ್ರಸ್ತುತ ಸರ್ಕಾರದಲ್ಲಿ ಸೋಮಣ್ಣನವರು ವಸತಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಭೂಮಾಲೀಕರೊಂದಿಗೆ ಸರಣಿ ಸಭೆ ನಡೆಸಿ ಶೇ.50:50ರ ಅನುಪಾತದಲ್ಲಿ ಭೂಮಿ ಪಡೆಯಲು ಭೂಮಾಲೀಕರ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ 7 ವರ್ಷದಿಂದ ಇತ್ತ ಪರಿಹಾರವೂ ದೊರೆಯದೇ, ಅತ್ತ ಭೂಮಿಯೂ ಇಲ್ಲದೇ ಅತಂತ್ರರಾಗಿದ್ದ ಭೂಮಾಲೀಕರ ಸಂಕಷ್ಟಕ್ಕೆ ಕೊನೆಗೂ ಸರ್ಕಾರ ಸ್ಪಂದಿಸಿ ಅವರ ಬೇಡಿಕೆಯಂತೆ ಪ್ರತಿ ಎಕರೆಗೆ 20.00 ಲಕ್ಷ ರೂಪಾಯಿಗಳ ಮುಂಗಡ ನೀಡಲು ಸಹ ಇಂದಿನ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಚಿವರ ಈ ದಿಟ್ಟ ಕ್ರಮಗಳಿಂದಾಗಿ ಕರ್ನಾಟಕ ಗೃಹ ಮಂಡಳಿಯು ಪ್ರತಿಷ್ಠಿತ, ವಿಶ್ವದರ್ಜೆಯ ಪ್ರಧಾನಮಂತ್ರಿ ಟೌನ್‍ಶಿಪ್ ನಿರ್ಮಾಣಕ್ಕೆ ಮುಂದಡಿ ಇಟ್ಟಿದೆ.

ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಭೂಸ್ವಾಧೀನವನ್ನು ಕೈಗೊಂಡಿದ್ದರೆ ಈ ಯೋಜನೆಗೆ ಸುಮಾರು ರೂ.4,200 ಕೋಟಿ ವೆಚ್ಚ ಭರಿಸಬೇಕಿತ್ತು. ಆದರೇ, ಈಗ ಇದೇ ಯೋಜನೆಯನ್ನು ಪಾಲುದಾರಿಕೆಯಲ್ಲಿ ಕೇವಲ ರೂ.1,910 ಕೋಟಿಗಳಲ್ಲಿ ಅನುಷ್ಠಾನಗೊಳಿಸುತ್ತಿರುವುದರಿಂದ ಮಂಡಳಿಗೂ ಲಾಭದಾಯಕವಾದ ಹಾಗೂ ಭೂಮಾಲೀಕರಿಗೂ ಅನುಕೂಲವಾಗಿರುವ ಈ ಕ್ರಮವು ಚರಿತ್ರಾರ್ಹ ಸಾಧನೆಯಾಗಿದೆ.

ಅಲ್ಲದೇ, ಈ ಯೋಜನೆಯ ಅನುಷ್ಠಾನದಿಂದ ಕರ್ನಾಟಕ ಗೃಹ ಮಂಡಳಿಯ ವರ್ಚಸ್ಸು ಯಾವುದೇ ರಿಯಲ್ ಎಸ್ಟೇಟ್ ಕಂಪೆನಿಗೆ ಕಡಿಮೆ ಇಲ್ಲದಂತೆ ವೃದ್ಧಿಸಲಿದೆ.

ಮಂಡಳಿಯ ಮಹತ್ವಪೂರ್ಣ ಯೋಜನೆಯೊಂದರ ಯಶಸ್ವಿಗೆ ಕಗ್ಗಂಟಾಗಿದ್ದ ಸಮಸ್ಯೆಯೊಂದಕ್ಕೆ ಇಂದಿನ ಸಚಿವ ಸಂಪುಟದ ನಿರ್ಧಾರ ತಾರ್ಕಿಕ ಅಂತ್ಯ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಸಚಿವ ಸೋಮಣ್ಣ ಇದಕ್ಕಾಗಿ ಕಾರಣರಾದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ, ಸಂಪುಟ ಸಹೋದ್ಯೋಗಿಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ಮೈಸೂರು ಬಳಿಯ ಕೆ.ಆರ್.ಎಸ್ ನಿಸರ್ಗ ವಸತಿ ಯೋಜನೆಯ ಸ್ಥಗಿತಗೊಂಡಿದ್ದ ಕಾಮಗಾರಿಗೆ ಚಾಲನೆ

ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯ ವಿವಿಧ ಗ್ರಾಮದ 469 ಎಕರೆ ಪ್ರದೇಶದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಅಭಿವೃದ್ಧಿಪಡಿಸಿದ ಕೆ.ಆರ್.ಎಸ್ ನಿಸರ್ಗ ವಸತಿ ಯೋಜನೆಗೆ ಸಂಬಂಧಿಸಿದಂತೆ ಇಂದಿನ ಸಚಿವ ಸಂಪುಟ ಭೂಮಾಲೀಕರಿಗೆ ಸಾಂತ್ವನ ನಿವೇಶನ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಸಚಿವ ಸೋಮಣ್ಣನವರು 2008-13ರ ಅವಧಿಯಲ್ಲಿ ವಸತಿ ಸಚಿವರಾಗಿದ್ದಾಗ ಈ ಯೋಜನೆಯನ್ನು ಕೈಗೆತ್ತಿಕೊಂಡು ಈ ಬಡಾವಣೆಯಲ್ಲಿ ಸುಮಾರು 6,500 ವಿವಿಧ ವರ್ಗದ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಶೇ.90ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿತ್ತು.

ಆದರೇ, ಭೂಮಿ ಕಳೆದುಕೊಂಡ ರೈತರು ಸಾಂತ್ವನ ನಿವೇಶನಕ್ಕಾಗಿ ಹಕ್ಕೋತ್ತಾಯಿಸಿ ಯೋಜನೆಯ ಅನುಷ್ಠಾನಕ್ಕೆ ಅಡ್ಡಿಪಡಿಸಿದ ಪರಿಣಾಮ 2015ರಿಂದ 2019ರವರೆಗೆ ಕಾಮಗಾರಿ ಸ್ಥಗಿತಗೊಂಡಿತ್ತು.

ಭೂಮಿ ಕಳೆದುಕೊಂಡ ರೈತರಿಗೆ ಅರ್ಧ ಎಕರೆಗೆ 6×9 ಮೀ. ಅಳತೆಯ ಒಂದು ನಿವೇಶನ ಹಾಗೂ ಎಕರೆಯೊಂದಕ್ಕೆ 9×12 ಮೀ. ಅಳತೆಯ ನಿವೇಶನವನ್ನು ಕ್ರಮವಾಗಿ ರೂ.50,000/- ಹಾಗೂ ರೂ.1,00,000/- ಪಾವತಿಸಿಕೊಂಡು ಸಾಂತ್ವನ ನಿವೇಶನವಾಗಿ ನೀಡುವ ಇಂದಿನ ಸಚಿವ ಸಂಪುಟ ನಿರ್ಧಾರದಿಂದ 2015ರಿಂದ ಕಗ್ಗಂಟಾಗಿ ಪರಿಣಮಿಸಿದ್ದ ಭೂಮಾಲೀಕರ ವಿವಾದಕ್ಕೆ ಪರಿಹಾರ ಸಿಕ್ಕಿದೆ.

ಅಲ್ಲದೇ, ಇದರಿಂದ ಯೋಜನೆಯು ಪುನರಾರಂಭಗೊಂಡು ಹಂಚಿಕೆಯಾಗದೇ ಬಾಕಿ ಉಳಿದ ಸುಮಾರು 2,500 ವಿವಿಧ ಸ್ವತ್ತುಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡುವುದರಿಂದ ಕರ್ನಾಟಕ ಗೃಹ ಮಂಡಳಿಗೆ ರೂ.260 ಕೋಟಿ ಆದಾಯ ಬರಲಿದೆ ಎಂದು ಸಚಿವ, ಸೋಮಣ್ಣ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

# ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಸೂಕ್ತ ಪರಿಹಾರ :
ಇತ್ತೀಚೆಗೆ ಜಲಪ್ರಳಯದಿಂದ ನಲುಗಿರುವ ಕೊಡಗು ಜಿಲ್ಲೆಗೆ ಅತಿವೃಷ್ಟಿಯಿಂದ ಶಾಶ್ವತ ಪರಿಹಾರ, ಬೆಳೆ ಹಾನಿ ಮತ್ತು ಮೂಲಸೌಕರ್ಯದ ಹಾನಿಗೆ ಸಂಬಂಧಿಸಿದಂತೆ ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ವಿವರವಾಗಿ ಪತ್ರ ಬರೆದ ಸಚಿವ ಸೋಮಣ್ಣ ಜಿಲ್ಲೆಯಲ್ಲಿ 91 ಗ್ರಾಮಗಳು ಮಳೆಯಿಂದ ಉಂಟಾದ ಪ್ರವಾಹಕ್ಕೆ ತುತ್ತಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಸುಮಾರು 41,026 ಹೆಕ್ಟೇರ್ ಬೆಳೆಹಾನಿ, ಅಂದಾಜು ರೂ.415.00 ಕೋಟಿಗಳ ಮೂಲಸೌಕರ್ಯ ಹಾನಿಯಾಗಿದ್ದು, ಹಾನಿಗೀಡಾದ ರಸ್ತೆ, ಸೇತುವೆ, ಇತ್ಯಾದಿ ಮೂಲ ಸೌಕರ್ಯಗಳ ದುರಸ್ಥಿ ಹಾಗೂ ಪುನರ್‍ನಿರ್ಮಾಣ ಸಮರೋಪಾದಿಯಲ್ಲಿ ಮಾಡಬೇಕು.

ಜೊತೆಗೆ ರೈತರ ಜಮೀನಿನಲ್ಲಿ ಸಂಗ್ರಹವಾದ ಮರಳನ್ನು ರಾಯಲ್ಟಿ ಇಲ್ಲದೇ ಮಾರಾಟ ಮಾಡಲು ಭೂಮಾಲೀಕ ರೈತರಿಗೆ ಅವಕಾಶ ನೀಡಬೇಕು ಹಾಗೂ ಕಾಫಿ ಬೆಳೆಗಾರರ ತೋಟದಲ್ಲಿ ಬಿದ್ದಿರುವ ಬೆಲೆ ಬಾಳುವ ಮರಗಳನ್ನು ಹೊರತುಪಡಿಸಿ ಇತರೇ ಮರಗಳನ್ನು ಮಾರಾಟ ಮಾಡಲು ಅದೇ ರೈತರಿಗೆ ಅವಕಾಶ ನೀಡಬೇಕು.

ಅಲ್ಲದೇ, ಹಿಂದಿನ ಸಾಲಿನಲ್ಲಿ ಘೋಷಣೆಯಾದ ಪ್ರವಾಹ ಪ್ಯಾಕೇಜ್ ರೂ.536.00 ಕೋಟಿಗಳ ಪೈಕಿ ಬಿಡುಗಡೆಗೆ ಬಾಕಿ ಇರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದೂ ಸಹಾ ಪತ್ರದಲ್ಲಿ ವಿವರಿಸಿದ್ದಾರೆ. ಮುಂದುವರೆದು, ಜಿಲ್ಲೆಯು ಪದೇ ಪದೇ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಮೂರು ತಾಲ್ಲೂಕುಗಳನ್ನು ಅತಿವೃಷ್ಠಿಪೀಡಿತವೆಂದು ಘೋಷಿಸಬೇಕು ಎಂದೂ ಸಹಾ ಆಗ್ರಹಿಸಿದ್ದಾರೆ.

ಸಚಿವ ಸೋಮಣ್ಣನವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಮುಖ್ಯ ಮಂತ್ರಿಯವರು ಈ ಬಗ್ಗೆ ಕೂಡಲೇ ಸೂಕ್ತ ಆದೇಶವನ್ನು ಸರ್ಕಾರದಿಂದ ಹೊರಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.

Facebook Comments

Sri Raghav

Admin