ಬೆಂಗಳೂರಲ್ಲಿ ಬಡವರಿಗೆ ಮನೆ ನಿರ್ಮಿಸಲು 445 ಎಕರೆ ಸರ್ಕಾರಿ ಭೂಮಿ ಹಸ್ತಾಂತರ ಕುರಿತು ಮಾತುಕತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯಲ್ಲಿ ಲಭ್ಯವಿರುವ 445 ಎಕರೆ ಸರ್ಕಾರಿ ಭೂಮಿಯನ್ನು ಪ್ರಧಾನಮಂತ್ರಿ ವಸತಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ 1 ಲಕ್ಷ ಬಹುಮಹಡಿ ವಸತಿ ಯೋಜನೆ’ಗೆ ಸರ್ಕಾರದ ಜಮೀನು ಹಸ್ತಾಂತರ ಕುರಿತಂತೆ  ನಡೆದ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಬೆಂಗಳೂರು ನಗರ ಜಿಲ್ಲೆಯಲ್ಲಿ ಪ್ರಧಾನಮಂತ್ರಿಗಳ ಎಲ್ಲರಿಗೂ ಸೂರು ಆಶಯದಂತೆ ನಿರ್ಮಾಣ ಮಾಡಲು ಹೊರಟಿರುವ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ 316 ಎಕರೆಯಲ್ಲಿ 46,000 ಮನೆಗಳ ನಿರ್ಮಾಣ ವಿವಿಧ ಹಂತಗಳಲ್ಲಿದೆ.

ಆಗಸ್ಟ್ 15ರಂದು ಮುಖ್ಯಮಂತ್ರಿಗಳು 5000 ಮನೆಗಳನ್ನು ಬಡವರಿಗೆ ವಿತರಿಸಲಿದ್ದಾರೆ ಎಂದು ಪ್ರಕಟಿಸಿದರು. ಬೆಂಗಳೂರು ನಗರ ಜಿಲ್ಲೆಯಲ್ಲಿ ಪಕ್ಷ ಬೇಧ ಬಿಟ್ಟು ಎಲ್ಲ ಶಾಸಕರಿಗೂ ತಮ್ಮ ವ್ಯಾಪ್ತಿಯಲ್ಲಿ ಶೇ.50ರಷ್ಟು ಮನೆಗಳನ್ನು ಬಡವರಿಗೆ ವಿತರಿಸಲು ಅವಕಾಶ ಮಾಡಿಕೊಡಲಾಗುವುದು. ಆದರೆ ಅರ್ಹರಿಗೆ ಮಾತ್ರ ಮನೆಗಳನ್ನು ಹಂಚಬೇಕು ಎಂದು ಹೇಳಿದ ಸಚಿವರು, ಬಡವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಗಳನ್ನು ನೀಡಲಾಗುತ್ತಿದೆ.

ತಲಾ 7 ಲಕ್ಷ ರೂ ನಿಗದಿ ಪಡಿಸಿದ್ದ ದರಗಳನ್ನು 5 ಲಕ್ಷ ರೂ.ಗಳಿಗೆ ತಗ್ಗಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ 4.20 ಲಕ್ಷ ರೂ. ನಿಗದಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಬಡವರಿಗೆ ಸೂರು ಒದಗಿಸುವ ಕೆಲಸದಲ್ಲಿ ಯಾವುದೇ ಅಧಿಕಾರಿಗಳು ವಿಳಂಬ, ಕರ್ತವ್ಯಲೋಪ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಕೊಳಚೆ ಅಭಿವೃದ್ಧಿ ಮಂಡಳಿ ಮೂಲಕ 1.80 ಲಕ್ಷ ಮನೆ ನಿರ್ಮಾಣ ಮಾಡುವ ಕೆಲಸ ಆರಂಭವಾಗಿದ್ದು, ವಿವಿಧ ಹಂತದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಒಂದು ವರ್ಷದ ಅವಧಿಯಲ್ಲಿ ಈ ಮನೆಗಳ ನಿರ್ಮಾಣ ಬಹತೇಕ ಮುಗಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳು 70,000 ಮನೆಗಳನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿವೆ ಎಂದು ಹೇಳಿದರು.

ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಮಂಜುನಾಥ್, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ , ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥಪ್ರಸಾದ್, ವಸತಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ರಾಜೀವ್ ಗಾಂಧಿ ವಸತಿ ನಿಗಮದ ಆಯುಕ್ತ ಬಸವರಾಜ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ, ಭೂಮಾಪನ ಹಾಗೂ ಭೂ ದಾಖಲೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲ್ಲೂಕುಗಳ ತಹಸೀಲ್ದಾರರು ಹಾಜರಿದ್ದರು.

Facebook Comments

Sri Raghav

Admin