ಯಡಿಯೂರಪ್ಪನವರ ವಿಡಿಯೋ ವೈರಲ್ ಆಗಬಾರದಿತ್ತು : ಸಚಿವ ಸೋಮಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.2-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಬಾರದಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು. ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಸಭೆಯಲ್ಲಿ ಅನರ್ಹ ಶಾಸಕರಿಂದಲೇ ಸಿಎಂ ಆಗಿದ್ದೇನೆ ಹಾಗೂ ಅನರ್ಹರು ಬಿಜೆಪಿ ಬರುತ್ತಾರೆಂಬ ರೀತಿಯಲ್ಲಿ ಮಾತನಾಡಿಲ್ಲ ಎಂದು ಸಮರ್ಥಿಸಿಕೊಂಡರು.

ಅನರ್ಹರು ಅವರವರ ಪಕ್ಷಗಳ ಅವ್ಯವಸ್ಥೆಯಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಹಾಗಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬ ಅರ್ಥದಲ್ಲಿ ಯಡಿಯೂರಪ್ಪ ಹೇಳಿದ್ದಾರೆ. ಅದನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿರುವುದು ನಿಜಕ್ಕೂ ನೋವು ತಂದಿದೆ ಎಂದು ತಿಳಿಸಿದರು. ಈ ಪ್ರಕರಣವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತದೆ.

ಶಿಸ್ತಿನ ಪಕ್ಷದಲ್ಲಿ ಈ ರೀತಿ ಬೆಳವಣಿಗೆ ಆಗಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸೋಮಣ್ಣ, ಸಿದ್ದರಾಮಯ್ಯ ಅವರ ಹೇಳಿಕೆ ಕೈಲಾಗದವರು ಮೈ ಪರಚಿಕೊಂಡಂತೆ ಆಗಿದೆ ಎಂದು ಟಾಂಗ್ ನೀಡಿದರು. ನಿನ್ನೆ ಸಿದ್ದರಾಮಯ್ಯ ಮಾಧ್ಯಮ ಸಂವಾದದಲ್ಲಿ ಬಿಜೆಪಿ ಸರ್ಕಾರ 100 ದಿನ ಪೂರೈಸಿದೆ.

ಆದರೆ ಪರೀಕ್ಷೆಯಲ್ಲಿ ಉತ್ತರವನ್ನೇ ಬರೆದಿಲ್ಲ. ಹಾಗಾಗಿ ಅಂಕ ಕೊಡುವ ಅಗತ್ಯವೇ ಇಲ್ಲ ಎಂದು ಹೇಳಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 100 ದಿನದಲ್ಲಿ ಏನು ಸಾಧನೆ ಮಾಡಿದ್ದರು ಎಂದು ಮರುಪ್ರಶ್ನೆ ಹಾಕಿದರು.

ಸಿದ್ದರಾಮಯ್ಯ ಅನುಭವದ ಕೊರತೆಯಿಂದ ಹೀಗೆ ಮಾತನಾಡಿದ್ದಾರೆ ಅಥವಾ ಉದ್ದೇಶಪೂರ್ವಕವಾಗಿ ಮಾತನಾಡುತ್ತಿದ್ದಾರಾ ಎಂಬುದು ತಿಳಿದಿಲ್ಲ. ಅವರ ಅವಧಿಯಲ್ಲಿ ಏನಾಗಿತ್ತು ಎಂಬುದರ ಬಗ್ಗೆ ಚರ್ಚಿಸಲಿ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಬರಗಾಲ ಇತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯ ಸುಭಿಕ್ಷವಾಗಿದೆ ಎಂದು ಹೇಳಿದರು. ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, ನಾನು ಇದುವರೆಗೂ ಒಂದೇ ಒಂದು ವರ್ಗಾವಣೆ ಪತ್ರಕ್ಕೂ ಸಹಿ ಮಾಡಿಲ್ಲ ಎಂದು ಹೇಳಿದರು.

Facebook Comments