ಡಿಸೆಂಬರ್ ಅಂತ್ಯಕ್ಕೆ 46 ಸಾವಿರ ಮನೆಗಳ ನಿರ್ಮಾಣ : ವಸತಿ ಸಚಿವ ಸೋಮಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.14- ಮುಖ್ಯಮಂತ್ರಿ ಗಳ ವಸತಿ ಯೋಜನೆಯಡಿ ಬೆಂಗಳೂರು ಮಹಾನಗರದಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಮಾಡುವ ಉದ್ದೇಶವಿದ್ದು, 2020ರ ಡಿಸೆಂಬರ್ ಅಂತ್ಯಕ್ಕೆ 46 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಮಹಾನಗರದಲ್ಲಿ ಒಂದು ಲಕ್ಷ ಮನೆಗಳ ನಿರ್ಮಾಣ ಯೋಜನೆಯನ್ನು ಪ್ರಕಟಿಸಿದ್ದರು. ಯೋಜನೆಯನ್ನು ಕೇವಲ ಘೋಷಣೆ ಮಾಡಲಾಯಿತೇ ಹೊರತು ಒಂದೇ ಒಂದು ಮನೆಯನ್ನೂ ಸಹ ನಿರ್ಮಾಣ ಮಾಡಿಲ್ಲ. ಕಾರ್ಯಾದೇಶವನ್ನು ನೀಡಲಾಗಿದ್ದರೂ ಸಹ ಕಾಮಗಾರಿ ಆರಂಭಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯಡಿ ಕೊಳಗೇರಿ ಪ್ರದೇಶದ ವಸತಿ ರಹಿತರಿಗೆ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಇದರಲ್ಲಿ 46 ಸಾವಿರ ಮನೆಗಳ ನಿರ್ಮಿಸಲು ಅನುಮೋದನೆ ಸಿಕ್ಕಿದೆ. ಇದೇ ತಿಂಗಳ 20 ರಂದು ಬೆಂಗಳೂರು ಮಹಾನಗರದ ಶಾಸಕರ ಸಭೆ ಕರೆಯಲಾಗಿದೆ. ಎಲ್ಲೆಲ್ಲಿ ವಸತಿಗಳನ್ನು ನಿರ್ಮಾಣ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಿದ್ದೇವೆ ಎಂದರು.

46 ಸಾವಿರ ಮನೆಗಳು ಈ ವರ್ಷವೇ ಪೂರ್ಣಗೊಳಿಸುವಂತೆ ಸೂಚನೆ ಕೊಡಲಾಗಿದೆ. 6 ಪ್ಯಾಕೇಜ್‍ಗಳಲ್ಲಿ ಕಾಮಗಾರಿ ನಡೆಯಲಿದೆ. ಐದು ವರ್ಷ ಗುತ್ತಿಗೆದಾರರೇ ನಿರ್ವಹಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಇನ್ನು ಮುಂದೆ ಬೆಂಗಳೂರು ಮಹಾ ನಗರದಲ್ಲಿ ಬಹುಮಹಡಿ ಕಟ್ಟಡ ಗಳನ್ನು ನಿರ್ಮಾಣ ಮಾಡುವುದಿಲ್ಲ. ಏಕೆಂದರೆ ನಮಗೆ ಎಕರೆಗಟ್ಟಲೆ ಜಮೀನು ಸಿಗುತ್ತಿಲ್ಲ.ಜಿ+3 ಮಾತ್ರ ಕಟ್ಟಲಾಗು ವುದು. 14 ಮಹಡಿ ಮತ್ತಿತರ ವಸತಿ ಸಮುಚ್ಚಯ ಗಳನ್ನು ನಿರ್ಮಾಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಹಾನಗರ ಪಾಲಿಕೆ ಹೊರತುಪಡಿಸಿ ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ ವ್ಯಾಪ್ತಿಗಳಲ್ಲಿ ಜಿ+3, ಜಿ+4, ಜಿ+5 ಕಟ್ಟಡಗಳ ನಿರ್ಮಾಣ ಮುಂದುವರೆಯಲಿದೆ. 2023ರೊಳಗೆ ಬೆಂಗಳೂರು ಮಹಾನಗರದಲ್ಲಿರುವ ಕೊಳಗೇರಿ ಪ್ರದೇಶಗಳನ್ನು ಕೊಳಗೇರಿ ಮುಕ್ತ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲೇ 267 ಕೊಳಗೇರಿ ಪ್ರದೇಶಗಳಿದ್ದು, ಕನಿಷ್ಠ ಪಕ್ಷ ಶೇ.70ರಷ್ಟನ್ನಾದರೂ ಕೊಳಗೇರಿ ಮುಕ್ತಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

Facebook Comments