ಶಕ್ತಿಸೌಧದಲ್ಲಿ ಸಚಿವರರಿಗೆ ಕೊಠಡಿ ಹಂಚಲು ಸಿದ್ಧತೆ, ವಾಸ್ತುಪ್ರಕಾರ ರೇವಣ್ಣಗೆ 316ರ ಕೊಠಡಿ ಫಿಕ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha--01

ಬೆಂಗಳೂರು, ಜೂ.5- ಮಂತ್ರಿಮಂಡಲ ರಚನೆಗೆ ಕ್ಷಣಗಣನೆ ಪ್ರಾರಂಭವಾಗುತ್ತಿದ್ದ ಹಾಗೇ ಇತ್ತ ಶಕ್ತಿಸೌಧದಲ್ಲಿ ಕೊಠಡಿಗಳ ಹಂಚಿಕೆಗೆ ಸಿದ್ಧತೆ ಶುರುವಾಗಿದೆ. ವಿಧಾನಸೌಧದ ಮೂರನೇ ಮಹಡಿ ಸಚಿವರ ಅತಿ ಬೇಡಿಕೆಯ ಮಹಡಿಯಾಗಿದೆ. ಅದರಲ್ಲೂ ಸಿಎಂ ಕಚೇರಿ ಇರುವ ಪಶ್ಚಿಮ ದಿಕ್ಕಿನ ಮಹಡಿಯಲ್ಲಿನ ಕೊಠಡಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕ್ಯಾಬಿನೆಟ್ ಸಚಿವರು ಹೆಚ್ಚಿನ ಆದ್ಯತೆ ನೀಡುವುದು ಇದೇ ಮಹಡಿಗೆ. ಈಗಾಗಲೇ ವಿಧಾನಸೌಧ ಅಧಿಕಾರಿಗಳಿಗೆ ಕೊಠಡಿ ಹಂಚಿಕೆಯ ತಲೆನೋವು ಪ್ರಾರಂಭವಾಗಿದೆ.

ಡಿಸಿಎಂಗೆ ಈಗಾಗಲೇ ಎರಡು ಕೊಠಡಿ ಹಂಚಿಕೆ:
ಡಿಸಿಎಂ ಪರಮೇಶ್ವರ್ ಅವರಿಗೆ ಈಗಾಗಲೇ ಮೂರನೇ ಮಹಡಿಯಲ್ಲಿನ ಎರಡು ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಕೊಠಡಿ ಸಂಖ್ಯೆ 327 ಮತ್ತು 328 ನ್ನು ಈಗಾಗಲೇ ಪರಮೇಶ್ವರ್ ಕಾಯ್ದಿರಿಸಿದ್ದಾರೆ. 327ರಲ್ಲಿ ಈ ಮುಂಚಿನ ಸರ್ಕಾರದಲ್ಲಿ ಟಿ.ಬಿ.ಜಯಚಂದ್ರ ಇದ್ದರೆ, 328ನ್ನು ಮೋಹನ್ ಕುಮಾರಿಗೆ ಹಂಚಿಕೆ ಮಾಡಲಾಗಿತ್ತು. ಇದೀಗ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂಯಾಗಿ ಅಧಿಕಾರ ಸ್ವೀಕರಿಸಿರುವ ಡಾ.ಜಿ.ಪರಮೇಶ್ವರ್ ಈ ಎರಡೂ ಕೊಠಡಿಗಳನ್ನು ತಾವು ತೆಗೆದುಕೊಂಡಿದ್ದು, ನಿನ್ನೆ ವಾಸ್ತು ಪ್ರಕಾರ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದ್ದಾರೆ.

ಎಚ್.ಡಿ.ರೇವಣ್ಣಗೆ 316ರ ಕೊಠಡಿ ಫಿಕ್ಸ್
ಇನ್ನು ಸಿಎಂ ಕುಮಾರಸ್ವಾಮಿ ಸಹೋದರ ಎಚ್.ಡಿ.ರೇವಣ್ಣ ಸಂಪುಟ ಸಚಿವರಾಗಲಿದ್ದು, ತಮ್ಮ ನೆಚ್ಚಿನ ಕೊಠಡಿ 316ಕ್ಕೆ ಚಿತ್ತ ಹರಿಸಿದ್ದಾರೆ ಎನ್ನಲಾಗಿದೆ. ಏಕೆಂದರೆ ಈ ಮುಂಚೆಯೂ ಸಚಿವರಾಗಿದ್ದಾಗ ಅವರು ಮೂರನೇ ಮಹಡಿಯಲ್ಲಿರುವ 316ರ ಕೊಠಡಿಯಲ್ಲೇ ಕಾರ್ಯ ನಿರ್ವಹಿಸಿದ್ದರು. ವಾಸ್ತು ಪ್ರಕಾರನೇ ನಡೆದುಕೊಳ್ಳುವ ಎಚ್.ಡಿ.ರೇವಣ್ಣ ಅದೇ ಕೊಠಡಿಯನ್ನು ಈ ಬಾರಿಯೂ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಹಿಂದಿನ ಸರ್ಕಾರದಲ್ಲಿ ಕೆ.ಜೆ.ಜÁರ್ಜ್ಗೆ 316ರ ಕೊಠಡಿ ಹಂಚಿಕೆಯಾಗಿತ್ತು. ಕೆ.ಜೆ. ಜಾರ್ಜ್ ಗೆ ಈ ಬಾರಿನೂ ಸಚಿವ ಸ್ಥಾನ ಸಿಗಲಿದ್ದು, ಅವರಿಗೆ ಯಾವ ಕೊಠಡಿ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಆರ್ಥಿಕ ಸಲಹೆಗಾರ ಸುಬ್ರಮಣ್ಯಗೆ 330 ಸಂಖ್ಯೆ ರೂಂ:
ಸಿಎಂ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಎಸ್.ಸುಬ್ರಮಣ್ಯಗೆ ಮೂರನೇ ಮಹಡಿಯಲ್ಲಿರುವ 330 ಸಂಖ್ಯೆಯ ಕೊಠಡಿಯನ್ನು ನೀಡಲಾಗಿದೆ. ಸಂಪುಟ ಸಚಿವ ದರ್ಜೆ ಹೊಂದಿರುವ ಸುಬ್ರಮಣ್ಯಗೆ ಎಚ್.ಸಿ.ಮಹದೇವಪ್ಪರ ಕೊಠಡಿಯನ್ನು ನೀಡಲಾಗಿದೆ. ಈ ಸಂಬಂಧ ಸಿಬ್ಬಂದಿ ಈಗಾಗಲೇ ಕೊಠಡಿಯ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಿದ್ದಾರೆ.

ಸಿಎಂ ಕಚೇರಿ ಆಸುಪಾಸಿನ ಪ್ರಮುಖ ಕೊಠಡಿಗಳು:
ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಮೂರನೇ ಮಹಡಿಯಲ್ಲಿನ ಸಿಎಂ ಕಚೇರಿ ಆಸುಪಾಸಿನ ಕೊಠಡಿಗಳನ್ನು ಕ್ಯಾಬಿನೆಟ್ ದರ್ಜೆಯ ಸಚಿವರಿಗೇ ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಇದು ಸಚಿವರ ಬಹು ಬೇಡಿಕೆಯ ಕೊಠಡಿಗಳಾಗಿವೆ. ಇಲ್ಲಿ ಪ್ರಮುಖವಾಗಿ 314, 315, 316, 317, 327, 328, 329, ಮತ್ತು 330 ಸಂಖ್ಯೆಗಳ ಕೊಠಡಿಗಳಿವೆ. ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ-314, ಕಾಗೋಡು ತಿಮ್ಮಪ್ಪ- 315, ಎಚ್.ಸಿ.ಮಹದೇವಪ್ಪ-330, ಕೆ.ಜೆ. ಜಾರ್ಜ್-316, ಮೋಹನ್ ಕುಮಾರಿ-328, ಟಿ.ಬಿ.ಜಯಚಂದ್ರ-327, ಎಚ್.ಕೆ.ಪಾಟೀಲ್- 329 ಮತ್ತು ಬಸವರಾಜ್ ರಾಯರೆಡ್ಡಿ- 317 ಸಂಖ್ಯೆಯ ಕೊಠಡಿಗಳನ್ನು ಹಂಚಲಾಗಿತ್ತು.

Facebook Comments

Sri Raghav

Admin