ಸದನದಲ್ಲಿ ಸಚಿವರ ಗೈರು, ಪ್ರತಿಪಕ್ಷ ಸದಸ್ಯರಿಂದ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.19- ವಿಧಾನಸಭೆಯಲ್ಲಿ ಶಾಸಕರು, ಸಚಿವರ ಗೈರು ಹಾಜರಿ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಬೆರಳಣಿಕೆಯಷ್ಟು ಶಾಸಕರಷ್ಟೇ ಹಾಜರಿದ್ದರು. ಸಚಿವರ ಹಾಜರಿ ಕೂಡ ಅತ್ಯಂತ ವಿರಳವಾಗಿತ್ತು. ಕಾಂಗ್ರೆಸ್‍ನ ಶಾಸಕರಾದ ಪಿ.ಟಿ.ಪರಮೇಶ್ವರ್ ನಾಯಕ್ ಮತ್ತು ಜಮೀರ್ ಅಹಮದ್ ಖಾನ್ ಅವರು ಆಕ್ಷೇಪ ವ್ಯಕ್ತಪಡಿಸಿ ಹಲವರನ್ನು ತರಾಟೆಗೆ ತೆಗೆದುಕೊಂಡರು.

ಈ ಮಧ್ಯೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಶಾಸಕರಾದ ರಾಮದಾಸ್ ಮತ್ತು ಎಂ.ಸಿ.ಮನಗೂಳಿ ಅವರು ಕಲಾಪಕ್ಕೆ ಗೈರು ಹಾಜರಾಗಲು ಅನುಮತಿ ಕೇಳಿರುವ ಪತ್ರಗಳನ್ನು ಸದನದ ಗಮನಕ್ಕೆ ತಂದು ಅವರ ಗೈರುಹಾಜರಾತಿಗೆ ಸದನದ ಸಮ್ಮತಿ ಇದೆ ಎಂದು ಪ್ರಕಟಿಸಿದರು.

ಸ್ಪೀಕರ್ ಅವರು ಕಾನೂನು ಸುವ್ಯವಸ್ಥೆ ಮೇಲೆ ನಿಯಮ 69ರಡಿ ಚರ್ಚೆ ಆರಂಭಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು. ಮಾತು ಆರಂಭಿಸಿದ ಸಿದ್ದರಾಮಯ್ಯ ಅವರು, ಮಂತ್ರಿ ಗಳ ಗೈರು ಹಾಜರಿ ಕಂಡು ಕೆಂಡಮಂಡಲರಾದರು. ಇದು ಎಲ್ಲಾ ಕಾಲದಲ್ಲೂ ಇರುವ ರೋಗ. ಆದರೆ ಬಿಜೆಪಿ ಆಡಳಿತದಲ್ಲಿ ಇದು ಜಾಸ್ತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೂತನ ಸಚಿವರ ಪೈಕಿ ಸುಧಾಕರ್ ಹೊರತುಪಡಿಸಿ ಯಾರೂ ಹಾಜರಾಗಿಲ್ಲ. ಎರಡು ದಿನದಲ್ಲೇ ಇವರು ಆಸಕ್ತಿ ಕಳೆದುಕೊಂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಹೇಗೆ ಎಂದು ಪ್ರಶ್ನಿಸಿದರು.
ಆಗ ಮಧ್ಯಪ್ರವೇಶಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ನೂತನ ಸಚಿವರು ತಮ್ಮ ಕಚೇರಿಗಳಿಗೆ ಪೂಜೆ ಮಾಡುತ್ತಿದ್ದಾರೆ. ನೀವು ಮಾತು ಶುರು ಮಾಡಿ. ಎಲ್ಲಾ ಸಚಿವರು ಬರುತ್ತಾರೆ ಎಂದು ಸಮಾಧಾನ ಪಡಿಸಿದರು.

ಹಾಗಿದ್ದರೆ ಪೂಜೆ ಮುಗಿದ ಬಳಿಕವೇ ಅಧಿವೇಶನ ಕರೆಯ ಬೇಕಿತ್ತು ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.ಅಧಿವೇಶನದಲ್ಲಿ ಶಾಸಕರು, ಸಚಿವರು ಇಲ್ಲದಿದ್ದ ಮೇಲೆ ಚರ್ಚೆ ಮಾಡಿ ಏನು ಪ್ರಯೋಜನ. ಆಗೊಮ್ಮೆ ನಾವೇ ಮಾತನಾಡಿಕೊಳ್ಳಬೇಕು ಎಂಬುದಿದ್ದರೆ ನಿಮ್ಮ ಕಚೇರಿಯಲ್ಲೇ ಮಾತನಾಡಬಹುದಿತ್ತು. ಇಲ್ಲಿ ಮಾತನಾಡುವುದು ಪ್ರಜಾಪ್ರಭುತ್ವದ ಯಶಸ್ವಿಗಾಗಿ. ನಾವೆಲ್ಲ ಸೇರಿ ಪ್ರಜಾಪ್ರಭುತ್ವವನ್ನು ಯಶಸ್ವಿ ಮಾಡಬೇಕಿದೆ ಎಂದರು.

ಅದಕ್ಕೆ ಸಹಮತ ವ್ಯಕ್ತಪಡಿಸಿದ ಸ್ಪೀಕರ ಕಾಗೇರಿ ಅವರು, ಇದು ಎಲ್ಲಾ ಕಾಲದಲ್ಲೂ ನಿರಂತರವಾಗಿ ಕಂಡು ಬರುವ ಸಮಸ್ಯೆ. ಸದನಕ್ಕೆ ಸಚಿವರು ಶಾಸಕರು ಹಾಜರಾಗಲೇ ಬೇಕು. ಇದು ಇವರ ಜವಾಬ್ದಾರಿ ಕೂಡ. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಅಷ್ಟರಲ್ಲಿ ಸದನದೊಳಗೆ ಬಂದ ಬಸವರಾಜ ಬೊಮ್ಮಾಯಿ ಅವರು, ತಡವಾಗಿ ಬಂದಿದ್ದಕ್ಕೆ ಬೇಷರತ್ ಕ್ಷಮೆ ಕೇಳಿದರು. ಅಲ್ಲಿಗೆ ಸಮಾ ಧಾನಗೊಂಡ ಸಿದ್ದರಾಮಯ್ಯ ಅವರು ತಮ್ಮ ಮಾತು ಮುಂದುವರೆಸಿದರು.

Facebook Comments

Sri Raghav

Admin