ಜೂಬಿಲಿಯಂಟ್ ಕಾರ್ಖಾನೆಗೆ ಸಚಿವರಾದ ಸುಧಾಕರ್, ಸೋಮಶೇಖರ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು, ಏ.22- ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ಇತ್ತೀಚೆಗೆ ಕೊರೋನಾ ಸೋಂಕು ಹರಡಲು ಕಾರಣವಾಗಿರುವ ಜೂಬಿಲಿಯಂಟ್ ಕಾರ್ಖಾನೆಗೆ ಇಂದು ವೈದ್ಯಕೀಯ ಸಚಿವ ಡಾ.ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಸೋಮಶೇಖರ್ ಜಿಲ್ಲಾ ಉನ್ನತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಜೂಬಿಲಿಯಂಟ್ ಕಾರ್ಖಾನೆಯ ಅಲ್ಲಿಯ ಅಧಿಕಾರಿಗಳ ಜೊತೆ ವೈದ್ಯಕೀಯ ಶಿಕ್ಷಣ ಸಚಿವ ಮಾತನಾಡಿ, ಕಾರ್ಖಾನೆ ಪರಿಸ್ಥಿತಿ ಕಾರ್ಮಿಕರು ಎಷ್ಟು ಮಂದಿ ಇದ್ದಾರೆ.

ಉತ್ಪಾದನೆ ಆಗುವ ಪದಾರ್ಥಗಳು ಯಾವುವು, ಯಾವ ದೇಶಕ್ಕೆ ರಪ್ತು ಆಗುತ್ತಿದೆ ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ಕಾರ್ಖಾನೆಯಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು ಕಾರ್ಖಾನೆಯಲ್ಲಿ ಉತ್ಪಾದನೆ ಆಗುವ ವಿವಿಧ ಹಂತದ ಪ್ರಕಿಯೆಗಳನ್ನು ವಿವರಿಸಿ, ಕಲ್ಮಶ ನೀರನ್ನು ಶುದ್ಧೀಕರಿಸಿ ನೀರು ಹೊರಗಡೆ ಬಿಡಲಾಗುತ್ತಿದೆ ಹಾಗೂ ಉತ್ಪಾದನೆಯಾಗುವ ಔಷಧ ಪಧಾರ್ಥವನ್ನು ಅನೇಕ ರಾಷ್ಟ್ರಗಳಿಗೆ ರಪ್ತು ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಸ್ಥಳೀಯ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಕಾರ್ಖಾನೆಯು ಪ್ರಾರಂಭದಿಂದಲೂ ಒಂದಿಲ್ಲೊಂದು ಸಮಸ್ಯೆಗಳಿಂದ ಕೂಡಿದ್ದು, ಜನಪ್ರತಿನಿಧಿಗಳ ಸಲಹೆಗಳಿಗೆ ಕಿಮ್ಮತ್ತಿಲ್ಲ. ಕಾರ್ಖಾನೆಯಿಂದ ಕಲ್ಮಶ ನೀರನ್ನು ನೇರವಾಗಿ ಹೊರ ಬಿಡುತ್ತಿರುವುದರಿಂದ ಜನ-ಜಾನುವಾರುಗಳು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಿಗೆ ತಿಳಿಸಿದರು.

ತಕ್ಷಣ ಸಚಿವರು ಕಾರ್ಖಾನೆಯಿಂದ ಹೊರಬಿಡುವ ನೀರನ್ನು 3 ತಿಂಗಳಿಗೊಮ್ಮೆ ಪರೀಕ್ಷೆ ನಡೆಸಲು, 1 ಕಿ.ಮೀ ವರೆಗೂ ಸುತ್ತಮುತ್ತ ಗ್ರಾಮದಲ್ಲಿ ಬೋರ್‍ವೆಲ್‍ಗಳಲ್ಲಿ ನೀರನ್ನು ಲ್ಯಾಬ್ ಕಳುಹಿಸಿ ಪರಿಶೀಲಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‍ಗೆ ಸೂಚಿಸಿದರು. ನಂತರ ಒಂದೂವರೆ ಸಾವಿರಕ್ಕೂ ಹೆಚ್ಚು ನೌಕರರಿಗೆ ಕೆಲಸ ನೀಡಿದ್ದಾರೆ. ಅದನ್ನು ಪರಿಗಣಿಸಬೇಕಲ್ಲವೇ ಶಾಸಕರೇ ಎಂದಾಗ ಅದಕ್ಕೆ ಶಾಸಕ ಬಿ.ಹರ್ಷವರ್ಧನ್ ಪ್ರತಿಕ್ರಿಯಿಸಿ ಈ ಕಾರ್ಖಾನೆ ಆಡಳಿತ ಮಂಡಳಿ ಸ್ಥಳೀಯರಿಗೆ ಸ್ಪಂದಿಸುತ್ತಿಲ್ಲಾ ಹೊರ ರಾಜ್ಯದವರಿಗೆ ಹೆಚ್ಚು ಮಾನ್ಯತೆ ನೀಡುತ್ತಿದ್ದಾರೆ ಎಂದಾಗ ಸಚಿವರು ಜೂಬಿಲಿಯಂಟ್ ಅಧಿಕಾರಿಗಳಿಗೆ ಸ್ಥಳೀಯರನ್ನು ಪರಿಗಣಿಸುವಂತೆ ತಿಳಿಸಿದರು.

ನಂತರ ಸಚಿವ ದ್ವಯರು ತಾಲ್ಲೂಕಿನ ಕೂಗಲೂರು ಗ್ರಾಮದಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಬಿ.ಹರ್ಷವರ್ಧನ್, ನಿರಂಜನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ವಂತ್, ಡಿವೈಎಸ್ಪಿ ಪ್ರಭಾಕರ್ ರಾವ್ ಸಿಂಧೆ, ನೊಡೆಲ್ ಅಧಿಕಾರಿ ಶ್ರೀನಿವಾಸಗೌಡ , ತಹಸೀಲ್ದಾರ್ ಕೆ.ಎಂ. ಮಹೇಶ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಲಾವತಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

 

Facebook Comments

Sri Raghav

Admin