ಕಿರಿಯ ಸಹಾಯಕ ಹುದ್ದೆ ರದ್ದುಪಡಿಸದಂತೆ ಸಚಿವಾಲಯ ನೌಕರ ಸಂಘ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25- ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಸಚಿವಾಲಯದಲ್ಲಿರುವ ಕಿರಿಯ ಸಹಾಯಕ ಹುದ್ದೆಗಳನ್ನು ರದ್ದುಪಡಿಸದೆ ಯಥಾಸ್ಥಿತಿ ಮುಂದುವರೆಸಬೇಕೆಂದು ಸಚಿವಾಲಯ ಸಿಬ್ಬಂದಿ ಸರ್ಕಾರಿ ನೌಕರರ ಸಂಘ ಒತ್ತಾಯಿಸಿದೆ.  ವೈಜ್ಞಾನಿಕವಾಗಿ ಅಧ್ಯಯನವನ್ನು ನಡೆಸದೆ ಕಡೆಪಕ್ಷ ನೌಕರರ ಸಂಘದ ಅಭಿಪ್ರಾಯವನ್ನು ಪಡೆಯದೇ ಏಕಾಏಕಿ ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದುಪಡಿಸಲು ಮುಂದಾಗಿರುವುದು ಸರಿಯಲ್ಲ ಎಂದು ಸಚಿವಾಲಯ ಸಿಬ್ಬಂದಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಆಗ್ರಹಿಸಿದ್ದಾರೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಯಾವ ಆಧಾರದ ಮೇಲೆ ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದು ಮಾಡಲು ಮುಂದಾಗಿದೆಯೋ ಗೊತ್ತಿಲ್ಲ. ವಾಸ್ತವವಾಗಿ ಕಿರಿಯ ಸಹಾಯಕರ ಹುದ್ದೆಗಳೇ ಸಚಿವಾಲಯದ ಆಧಾರಸ್ತಂಭ ಎಂದು ಹೇಳಿದರು.  ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಮತ್ತಿತರರನ್ನು ಭೇಟಿಯಾಗಿ ನಮ್ಮ ಮನವಿಯನ್ನು ಸಲ್ಲಿಸಿದ್ದೇವೆ ಎಂದರು.

542 ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದುಪಡಿಸುವ ಮೂಲಕ ಇ-ಆಡಳಿತವನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ ಎಂಬುದು ಸ್ಪಷ್ಟವಾಗಿದೆ. ಸರ್ಕಾರದ ಈ ಕ್ರಮವನ್ನು ನಾವು ತೀವ್ರವಾಗಿ ವಿರೋಸುತ್ತೇವೆ ಎಂದು ಹೇಳಿದರು.  ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು.

ಇತ್ತೀಚೆಗೆ ಇಲಾಖೆಗಳಲ್ಲಿ ಕೆಲಸದ ಒತ್ತಡವು ಹೆಚ್ಚಾಗುತ್ತಿದೆ. ಒಂದಿಬ್ಬರು ಸಿಬ್ಬಂದಿಗಳಿಂದ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ನಾವು ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ. ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಸರ್ಕಾರ ಆರ್ಥಿಕ ಹೊರೆಯಾಗುತ್ತದೆ ಎಂದು ಹೇಳುವುದು ಸರಿಯಲ್ಲ. ಸಚಿವಾಲಯದಲ್ಲಿ ಮಾತ್ರ ಅನಗತ್ಯ ಸಿಬ್ಬಂದಿಗಳಿಲ್ಲ. ಯಾವ ಯಾವ ಇಲಾಖೆಗೆ ಎಷ್ಟೆಷ್ಟು ಸಿಬ್ಬಂದಿ ಅಗತ್ಯವಿದೆ ಎಂಬುದನ್ನು ಸಂಬಂಧಪಟ್ಟವರು ತೀರ್ಮಾನಿಸುತ್ತಾರೆ.

ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲನೆ ಮಾಡದಿದ್ದರೆ ನಾವು ಕೂಡ ಹೋರಾಟ ಮಾಡಬೇಕಾಗುತ್ತದೆ ಎಂದು ಗುರುಸ್ವಾಮಿ ಎಚ್ಚರಿಕೆ ನೀಡಿದರು.

Facebook Comments