ದೀಪಾವಳಿಗೂ ಮುನ್ನವೇ ಆಸ್ಪತ್ರೆಯಲ್ಲಿ ಬೆಡ್ ರೆಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.23-ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಕಣ್ಣುಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಇದ್ದು, ಮಿಂಟೋ ಕಣ್ಣಾಸ್ಪತ್ರೆ ಪ್ರಾದೇಶಿಕ ನೇತ್ರ ಚಿಕಿತ್ಸಾ ಸಂಸ್ಥೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅಗತ್ಯ ಸಿದ್ದತೆ ಮಾಡಿಕೊಂಡಿದೆ.

ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕಣ್ಣಿಗೆ ಹಾನಿಯಾದವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದಿನವಿಡೀ ಕಾರ್ಯ ನಿರ್ವಹಿಸಲು ಬೇಕಾದ ಸಿದ್ದತೆಗಳನ್ನು ಮಾಡಿಕೊಂಡಿರುವುದಾಗಿ ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗಳಾದಾಗ ಅಂಥವರಿಗೆ ತುರ್ತು ಸೇವೆಯ ಅಗತ್ಯವಿರುತ್ತದೆ. ನಮ್ಮ ಆಸ್ಪತ್ರೆಯಲ್ಲಿ ವೈದ್ಯರು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಎಲ್ಲ ವೈದ್ಯರು, ವೈದ್ಯಯೇತರ ಸಿಬ್ಬಂದಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

ಪ್ರತಿ ವರ್ಷವೂ ದೀಪಾವಳಿ ಸಂದರ್ಭದಲ್ಲಿ ಸರಾಸರಿ 50ರಿಂದ 60 ಜನರು ಕಣ್ಣಿನ ಚಿಕಿತ್ಸೆಗಾಗಿ ದಾಖಲಾಗುತ್ತಾರೆ. ಇದೇ ರೀತಿ ರಾಜ್ಯದ ಕಣ್ಣಾಸ್ಪತ್ರೆಗಳಲ್ಲೂ ದಾಖಲಾಗುತ್ತಾರೆ. ಕಣ್ಣಿಗೆ ತೊಂದರೆಯಾಗಿ ಆಸ್ಪತ್ರೆಗೆ ದಾಖಲಾಗುವವರಲ್ಲಿ 14 ವರ್ಷದೊಳಗಿನ ಮಕ್ಕಳೇ ಶೇ.40ರಷ್ಟಿರುತ್ತಾರೆ. ಅದರಲ್ಲೂ ಗಂಡುಮಕ್ಕಳ ಸಂಖ್ಯೆ ಹೆಚ್ಚಾಗಿರುತ್ತದೆ.

ಕಳೆದ ವರ್ಷ 48 ಮಂದಿ ಮಿಂಟೋ ಕಣ್ಣಾಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ 12 ವರ್ಷದೊಳಗಿನವರು 12 ಮಂದಿ, ಇಬ್ಬರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಹೇಳಿದರು.  ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳನ್ನು ಚಿಕಿತ್ಸೆಗಾಗಿ ಒದಗಿಸಲಾಗಿದೆ ಎಂದ ಅವರು, ಸಹಾಯವಾಣಿ 080-26707176 ಮತ್ತು ಮೊ: 9481740137 ಕರೆ ಮಾಡಿ ಚಿಕಿತ್ಸೆ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದರು.

ಇತ್ತೀಚೆಗೆ ಶಕ್ತಿಶಾಲಿ ಪಟಾಕಿಗಳನ್ನು ಸಿಡಿಸುವುದರಿಂದ ಶಬ್ದ ಹಾಗೂ ಪರಿಸರ ಮಾಲಿನ್ಯ ಉಂಟಾಗುತ್ತದೆ. ಜನರಿಗೂ ತೊಂದರೆಯಾಗುತ್ತದೆ ಎಂದರು.  ಪಟಾಕಿ ಸಿಡಿಸುವಾಗ ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಬೇಕು, ಬಯಲು ಪ್ರದೇಶದಲ್ಲಿ ಪಟಾಕಿ ಸಿಡಿಸುವುದು ಉತ್ತಮ.

ಪಟಾಕಿ ಸಿಡಿಸುವಾಗ ಮುಖವನ್ನು ದೂರವಿಟ್ಟುಕೊಳ್ಳಬೇಕು, ಐದು ವರ್ಷದೊಳಗಿನ ಮಕ್ಕಳಿಗೆ ಪಟಾಕಿ ಸಿಡಿಸಲು ಬಿಡಬಾರದು. ಮನೆ ಮತ್ತು ವಾಹನ ನಿಲುಗಡೆ ಸ್ಥಳದಲ್ಲಿ ಪಟಾಕಿ ಸುಡಬಾರದು. ಸುಟ್ಟಪಟಾಕಿಗಳನ್ನು ಮನಬಂದಂತೆ ಬಿಸಾಡಬಾರದು. ಸಾಧ್ಯವಾದಷ್ಟು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಪಟಾಕಿ ಸಿಡಿಸುವ ವೇಳೆ ಸಣ್ಣಪುಟ್ಟ ಗಾಯಗಳಾದರೂ ನಿರ್ಲಕ್ಷಿಸದೆ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.

Facebook Comments