ಪ್ರತ್ಯೇಕ ಪ್ರಕರಣ : ಇಬ್ಬರು ಮಕ್ಕಳು ಸೇರಿ ನಾಲ್ವರು ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.22- ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಪ್ರತ್ಯೇಕ ನಾಪತ್ತೆ ಪ್ರಕರಣಗಳಲ್ಲಿ ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಕಾಣೆಯಾಗಿದ್ದು, ಇವರುಗಳ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಕೂಡಲೇ ಕಂಟ್ರೋಲ್ ರೂಂಗಾಗಲಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲು ಮನವಿ ಮಾಡಲಾಗಿದೆ.

ಬಾಲಕಿ ನಾಪತ್ತೆ:
ಮೂಲತಃ ರಾಯಚೂರಿನವರಾದ ಶರಣಪ್ಪ ಕೂಲಿ ಕೆಲಸ ಅರಸಿ ಕುಟುಂಬದೊಂದಿಗೆ ನಗರಕ್ಕೆ ಬಂದು ಎಂಸಿಇಸಿಎಸ್ ಲೇಔಟ್‍ನಲ್ಲಿ ನಿರ್ಮಾಣ ಹಂತದ ಕಟ್ಟಡ ಕೆಲಸ ಮಾಡುತ್ತಾ, ಅಲ್ಲೇ ಶೆಡ್‍ನಲ್ಲಿ ವಾಸವಿದ್ದರು. ಇವರ ಮೂರು ವರ್ಷದ ಮಗಳು ಮಮತಾ ಏ.10ರಂದು ಅಂಗಡಿಯಲ್ಲಿ ಬಿಸ್ಕೆಟ್ ತರಲು ಹೋಗಿದ್ದಾಗ ಕಾಣೆಯಾಗಿದ್ದಾಳೆ.

ಮತ್ತೊಂದು ಪ್ರಕರಣದಲ್ಲಿ ಸಾರಾಯಿಪಾಳ್ಯದ ಭರತ್‍ನಗರದ ನಾಗಕಾಲಿಯಮ್ಮ ದೇವಸ್ಥಾನ ರಸ್ತೆಯಲ್ಲಿ ವಾಸವಿರುವ ಪರ್ವೀನ್‍ತಾಜ್ ಎಂಬುವರ ಮಗಳು ಅಲಿಝಾತಾಜ್ (6) ಮಾ.25ರಂದು ಮನೆ ಮುಂದೆ ಆಟವಾಡುತ್ತಿದ್ದಾಗ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ.

ಇನ್ನೊಂದು ಪ್ರಕರಣದಲ್ಲಿ ಬಸವಲಿಂಗಪ್ಪ ನಗರದ ನಿವಾಸಿ ವಸೀಂ ಪಾಷ ಎಂಬುವರ ಪತ್ನಿ ಅಮ್ರೀನ್ ತಾಜ್ (27) ಮಾ.9ರಂದು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಮನೆ  ಬಿಟ್ಟು ಹೋಗಿದ್ದು ವಾಪಸ್ ಬಂದಿಲ್ಲ.

ನಾಲ್ಕನೇ ಪ್ರಕರಣದಲ್ಲಿ ಮೂಲತಃ ಯಾದಗಿರಿ ಜಿಲ್ಲೆಯ ಸುನಿತ (19) ಕಟ್ಟಡ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಬಸವಲಿಂಗಪ್ಪ ನಗರದಲ್ಲಿ ಪೋಷಕರೊಂದಿಗೆ ವಾಸವಾಗಿದ್ದಳು.

ಮಾ.15ರಂದು ಸುನಿತಾ ಪೋಷಕರು ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ವಾಪಸ್ ಸಂಜೆ ಬಂದಾಗ ಮಗಳು ಸುನಿತಾ ಮನೆಯಲ್ಲಿ ಇರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಠಾಣೆಗೆ ದೂರು ನೀಡಿದ್ದಾರೆ.

ಈ ನಾಲ್ಕೂ ಪ್ರಕರಣಗಳಲ್ಲಿರುವವರ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಸಂಪಿಗೆಹಳ್ಳಿ ಠಾಣೆ ದೂ.ಸಂ.080-22943692 ಅಥವಾ 9480801424ಗೆ ತಿಳಿಸಲು ಮನವಿ ಮಾಡಲಾಗಿದೆ.

Facebook Comments