ಬುದ್ಧಿಮಾತು ಹೇಳಿ ಮಕ್ಕಳನ್ನು ಪೋಷಕರಿಗೆ ಒಪ್ಪಿಸಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.13- ಮಂಗಳೂರಿನಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿ ಹಾಗೂ ಮೂವರು ವಿದ್ಯಾರ್ಥಿಗಳನ್ನು ಇಂದು ಮುಂಜಾನೆ ಬೆಂಗಳೂರಿಗೆ ಕರೆತರಲಾಗಿದೆ. ನಿನ್ನೆ ಮುಂಜಾನೆ ಮಂಗಳೂರಿನಲ್ಲಿ ಬಿಸಿಎ ವಿದ್ಯಾರ್ಥಿನಿ ಅಮೃತವರ್ಷಿಣಿ ಹಾಗೂ ರಾಯನ್ ಸಿದ್ದಾರ್ಥ್, ಚಿಂತನ ಮತ್ತು ಭೂಮಿ ಪತ್ತೆಯಾಗಿದ್ದಾರೆಂಬ ಸುದ್ದಿ ತಿಳಿದ ತಕ್ಷಣ ಸೋಲದೇವನಹಳ್ಳಿ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ನೇತೃತ್ವದ ತಂಡ ಹಾಗೂ ಮಕ್ಕಳ ಪೋಷಕರು ಮಂಗಳೂರಿಗೆ ತೆರಳಿದ್ದರು.

ಮಂಗಳೂರಿನ ಪಾಂಡೇಶ್ವರ್ ಪೊಲೀಸ್ ಠಾಣೆಯಲ್ಲಿದ್ದ ಈ ನಾಲ್ವರನ್ನು ಇದೀಗ ಬೆಂಗಳೂರಿಗೆ ಕರೆತರಲಾಗಿದ್ದು, ಸೋಲದೇನವಹಳ್ಳಿ ಠಾಣೆ ಪೊಲೀಸರು ಮನೆ ಬಿಟ್ಟು ಹೋಗಲು ನಿಖರ ಕಾರಣವೇನು ಎಂಬುದರ ಬಗ್ಗೆ ನಾಲ್ವರಿಂದಲೂ ಹೇಳಿಕೆ ಪಡೆದುಕೊಂಡು ಮಕ್ಕಳಿಗೆ ಬುದ್ದಿಮಾತು ಹೇಳಿ ಪೊಷಕರಿಗೆ ಒಪ್ಪಿಸಿದ್ದಾರೆ.

ರೈಲಿನಲ್ಲಿ ರೌಂಡ್ಸ್:
ಅ.10ರಂದು ಮುಂಜಾನೆ ಈ ನಾಲ್ವರೂ ವಾಕಿಂಗ್‍ಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಒಬ್ಬಬ್ಬರಾಗಿ ಹೊರಗೆ ಬಂದು ಒಂದು ಕಡೆ ಒಟ್ಟಾಗಿ ಸೇರಿಕೊಂಡು ಚಿಕ್ಕಬಾಣವಾರ ರೈಲ್ವೆ ನಿಲ್ದಾಣಕ್ಕೆ ಹೋಗಿ ರೈಲಿನಲ್ಲಿ ಹಾವೇರಿಗೆ ಹೋಗಿದ್ದಾರೆ. ನಂತರ ಅಲ್ಲಿಂದ ರೈಲಿನಲ್ಲಿ ಮೈಸೂರಿಗೆ ಹೋಗಿ ಅಲೆಲ್ಲಾ ಸುತ್ತಾಡಿದ್ದಾರೆ. ಮತ್ತೆ ಮೈಸೂರಿನಿಂದ ರೈಲಿನಲ್ಲಿ ಅರಸೀಕೆರೆಗೆ ಹೋದ ಇವರು ಅಲ್ಲಿಯೂ ಕೆಲ ಸಮಯ ಕಾಲ ಕಳೆದು ಪುನಃ ಬೆಂಗಳೂರಿಗೆ ಬಂದಿದ್ದಾರೆ.

ತದನಂತರ ಬೆಂಗಳೂರಿನಿಂದ ಬಸ್‍ನಲ್ಲಿ ಮಂಗಳೂರಿಗೆ ಪ್ರಯಾಣ ಬೆಳೆಸಿ ನಿನ್ನೆ ಮುಂಜಾನೆ ಬಸ್‍ನಿಂದ ಇಳಿದಿದ್ದಾರೆ. ಆ ಸಂದರ್ಭದಲ್ಲಿ ಅಮೃತವರ್ಷಿಣಿ ತಮ್ಮ ಸಂಬಂಕರೊಂದಿಗೆ ದೂರವಾಣಿ ಕರೆ ಮಾಡಿ ವಿಳಾಸ ಕೇಳುತ್ತಿದ್ದಾಗ ಸ್ಥಳದಲ್ಲಿದ್ದ ಆಟೋ ಚಾಲಕರೊಬ್ಬರು ಗಮನಿಸಿದ್ದಾರೆ.

ಮಾಧ್ಯಮಗಳಲ್ಲಿ ನಾಲ್ವರು ಕಾಣೆಯಾಗಿರುವ ಬಗ್ಗೆ ಪ್ರಕಟಗೊಂಡಿದ್ದ ವಿಷಯ ತಿಳಿದಿದ್ದ ಈ ಆಟೋ ಚಾಲಕ, ಮಕ್ಕಳ ಚಲನವಲನ ಗಮನಿಸಿ, ಇವರು ಕಾಣೆಯಾಗಿರುವ ಮಕ್ಕಳೆಂಬುದನ್ನು ಖಾತ್ರಿಪಡಿಸಿಕೊಂಡು ಅವರ ಬಳಿ ಹೋಗಿ ವಿಳಾಸ ತೋರಿಸುವುದಾಗಿ ಹೇಳಿ ತಮ್ಮ ಆಟೋದಲ್ಲಿ ಹತ್ತಿಸಿಕೊಂಡು ಸೀದಾ ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸುವ ಮೂಲಕ ಪತ್ತೆಗೆ ಸಹಕರಿಸಿದ್ದಾರೆ.

Facebook Comments