ಮಿಜೋರಾಂನಲ್ಲಿ ಭೂಕಂಪ, ಮನೆಗಳು ಕುಸಿತ, ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

‎ಐಝ್ವಾಲ್, ಜೂ.22-ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಇಂದು ನಸುಕಿನಲ್ಲಿ ಭೂಕಂಪ ಸಂಭವಿಸಿ ಅನೇಕ ಮನೆಗಳು ಮತ್ತು ಕಟ್ಟಡಗಳು ಕುಸಿದಿದ್ದು, ಹಲವರಿಗೆ ಗಾಯಗಳಾಗಿವೆ. ಮಿಜೋರಾಂನ ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಚಂಫಾಲ್ ಜಿಲ್ಲೆಯ ಝೋಕಾವ್‍ತಾರ್ ಪ್ರದೇಶದಲ್ಲಿ 4.30ರ ನಸುಕಿನಲ್ಲಿ ಭೂಕಂಪ ಸಂಭವಿಸಿತು.

ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಗರ್ಭ ಅಧ್ಯಯನ ಕೇಂದ್ರ ತಿಳಿಸಿದೆ.ಭೂಕಂಪದಿಂದಾಗಿ ಕೆಲವು ಮನೆಗಳು ಮತ್ತು ಕಟ್ಟಡಗಳು ಕುಸಿದಿದ್ದು, ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿವೆ. ರಸ್ತೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಎಂದು ರಾಜ್ಯ ಭೂಗರ್ಭ ಮತ್ತು ಖನಿಜ ಸಂಪನ್ಮೂಲ ಇಲಾಖೆ ತಿಳಿಸಿದೆ.

ಭೂಕಂಪದಿಂದ ಝೋಕಾವ್‍ತಾರ್ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಕೆಲವೆಡೆ ಚರ್ಚ್‍ಗಳಿಗೂ ಹಾನಿಯಾಗಿದೆ.ಭೂಕಂಪದಿಂದ ಅದೃಷ್ಟವಶಾತ್ ಸಾವುಗಳು ಸಂಭವಿಸಿಲ್ಲವಾದರೂ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪ್ರಧಾನಿ ಭರವಸೆ: ಭೂಕಂಪ ಸಂಭವಿಸಿದ ನಂತರ ಇಂದು ಬೆಳಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಿಜೋರಾಂ ಮುಖ್ಯಮಂತ್ರಿ ಝೋರಾಂತಾಂಗಾ ಅವರೊಂದಿಗೆ ದೂರವಾಣಿ ಮೂಲಕ ಪರಿಸ್ಥಿತಿಯ ಮಾಹಿತಿ ಪಡೆದರು. ಅಲ್ಲದೆ ಕೇಂದ್ರದಿಂದ ಅಗತ್ಯವಾದ ಎಲ್ಲ ಸಹಕಾರ ಮತ್ತು ನೆರವು ನೀಡುವುದಾಗಿ ಭರವಸೆ ನೀಡಿದರು.

Facebook Comments