ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಎಂ.ಕೆ.ಪ್ರಾಣೇಶ್ ಅಭ್ಯರ್ಥಿಯಾಗಿ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ನಾಳೆ ಬೆಳಗ್ಗೆ ಪಕ್ಷದ ಮುಖರೊಂಡರೊಂದಿಗೆ ಪ್ರಾಣೇಶ್ ಅವರು ಉಪಸಭಾಪತಿ ಸ್ಥಾನಕ್ಕೆ ನಾಮಪತ್ತ ಸಲ್ಲಿಸಲಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಸಭಾಪತಿ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟು ಕೊಡಲು ಬಿಜೆಪಿ ತೀರ್ಮಾನಿಸಿದೆ. ಇದರಿಂದಾಗಿ ಜೆಡಿಎಸ್ ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರ ಹಾದಿಯೂ ಸುಗಮವಾಗಿದೆ.

ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಬಿಜೆಪಿ ಪರಿಷತ್ ಸದಸ್ಯರ ಸಭೆಯನ್ನು ನಡೆಸಲಾಯಿತು. ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಸಚಿವರಾದ ಜೆ.ಸಿ. ಮಾಧುಸ್ವಾಮಿ, ಆರ್ ಆಶೋಕ್ ಹಾಗೂ ಪರಿಷತ್ ಸದಸ್ಯರು ಭಾಗವಹಿಸಿದ್ದರು.

ಉಪಸಭಾಪತಿ ಸ್ಥಾನಕ್ಕೆ ಮಹೇಂತೇಶ್ ಕವಠಗಿ ಮಠ, ಶಶಿಲ್ ನಮೋಶಿ, ಅರುಣ್ ಶಹಾಪುರ್ ಸೇರಿದಂತೆ ಹಲವರ ಹೆಸರುಗಳು ಕೇಳಿ ಬಂದವು. ಆದರೆ, ಸಭಾಪತಿ ಸ್ಥಾನವನ್ನು ಬಸವರಾಜ ಹೊರಟ್ಟಿ ಅವರಿಗೆ ಬಿಟ್ಟು ಕೊಡುವುದು ಹಾಗೂ ಅವರು ವೀರಶೈವ ಸಮುದಾಯಕ್ಕೆ ಸೇರಿರುವುದರಿಂದ ಕೊನೆ ಕ್ಷಣದಲ್ಲಿ ಪ್ರಾಣೇಶ್ ಹೆಸರನ್ನು ಅಂತಿಮಗೊಳಿಸಲಾಯಿತು.

ಎರಡೂ ಸ್ಥಾನವನ್ನು ಒಂದೇ ಸಮುದಾಯಕ್ಕೆ ನೀಡಿದರೆ, ತಪ್ಪು ಸಂದೇಶ ರವಾನೆಯಾಗಬಹುದೆಂಬ ಕಾರಣದಿಂದಾಗಿ ಪ್ರಾಣೇಶ್ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಪರಿಷತ್ ನಲ್ಲಿ ಬಿಜೆಪ ಹಾಗೂ ಜೆಡಿಎಸ್ ನಡುವೆ ಮೈತ್ರಿ ಆಗಿರುವ ಕಾರಣ ಬಹುತೇಕ ಪ್ರಾಣೇಶ್ ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಒಂದು ವೇಳೆ ಯಾರೊಬ್ಬರೂ ನಾಮಪತ್ರ ಸಲ್ಲಿಸದಿದ್ದರೆ ಅವಿರೋಧ ಆಯ್ಕೆಗೆ ದಾರಿ ಸುಗಮವಾಗಲಿದೆ.

ಇನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಯಾವುದೇ ಕ್ಷಣದಲ್ಲಿ ತಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಅವರು ರಾಜಿನಾಮೆ ನೀಡಿದರೆ, ತೆರವಾಗಲಿರುವ ಸ್ಥಾನಕ್ಕೆ ಬಸವರಾಜ ಹೊರಟ್ಟೆ ಆಯ್ಕೆಯಾಗುವ ಸಾಧ್ಯತೆ ಇದೆ. ವಿಧಾನ ಪರಿಷತ್ ಒಟ್ಟು 75 ಸ್ಥಾನಗಳ ಪೈಕಿ ಆಡಳಿತಾರೂಢ ಬಿಜೆಪಿ 33 ಸದಸ್ಯರನ್ನು ಹೊಂದಿದೆ.

ಜೆಡಿಎಸ್ 13 ಸದಸ್ಯರನ್ನು ಹೊಂದಿರುವ ಕಾರಣ, ಸಭಾಪತಿ ಹಾಗೂ ಉಪಸಭಾಪತಿ ಸ್ಥಾನಗಳು ದೋಸ್ತೀಗೆ ಒಲಿಯಲಿದೆ. ಪರಿಷತ್ ನ ಉಪಸಭಾಪತಿಯಾಗಿದ್ದ ಜೆಡುಎಸ್ ನ ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಇದೇ 29 ರಂದು ಚುನಾವಣೆ ನಡೆಯಲಿದೆ.

ವಿಧಾನಪರಿಷತ್ ಬಲಾಬಲದಲ್ಲ ಯಾವುದೇ ಪಕ್ಷ ಸ್ವತಃ ಬಲದ ಮೇಲೆ ಸಭಾಪತಿ ಸ್ಥಾನ ಪಡೆಯಬೇಕಾದರೆ 38 ಸದಸ್ಯರನ್ನು ಹೊಂದಿರಬೇಕು. ಸದ್ಯ ಯಾವುದೇ ಪಕ್ಷಕ್ಕೂ ಬಹಮತ ಇಲ್ಲದ ಕಾರಣ, ಮೈತ್ರಿ ಅನಿವಾರ್ಯವಾಗಿದೆ.

ಇನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಮತ್ತೊಮ್ಮೆ ಅವಿಶ್ವಾಸ ನಿರ್ಣಯವನ್ನು ಮಂಡಿಸಿದೆ. ಹೀಗಾಗಿ ಅವರ ನಡೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ತಮ್ಮ ವಿರುದ್ದ ಬಿಜೆಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಸಭಾಪತಿ ಅವರು ತಿರಸ್ಕರಿಸಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

Facebook Comments

Sri Raghav

Admin