ತಮಿಳುನಾಡಿನ ಸಿಎಂ ಆಗಿ ಎಂ.ಕೆ.ಸ್ಟಾಲೀನ್ ಪ್ರಮಾಣವಚನ

ಈ ಸುದ್ದಿಯನ್ನು ಶೇರ್ ಮಾಡಿ

ಚೆನೈ, ಮೇ 7- ತಮಿಳುನಾಡಿನ ಮುಖ್ಯಮಂತ್ರಿಯಾಗಿ ಡಿಎಂಕೆ ನಾಯಕ ಎಂ.ಕೆ.ಸ್ಟಾಲೀನ್ ಇಂದು ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ 33 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೋವಿಡ್ ಆತಂಕದ ನಡುವೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಬನವರಿವಾಲ್ ಪುರೋಹಿತ್ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪ್ರಗತಿಜ್ಞಾ ವಿಧಿ ಬೋಧಿಸಿದರು. ಸ್ಟಾಲೀನ್ ಅವರ ಪತ್ನಿ ದುರ್ಗಾ ಸ್ಟಾಲೀನ್, ಪುತ್ರ ಉದಯನಿಧಿ, ಸಂಸದೆ ಹಾಗೂ ಸಹೋದರಿ ಕನ್ನಿಮೋಳಿ ಸೇರಿದಂತೆ ಕೆಲವರಷ್ಟೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

69 ವರ್ಷದ ಸ್ಟಾಲೀನ್ ಏಳು ಬಾರಿ ಶಾಸಕರಾಗಿ, ಎರಡು ಚೆನೈನ ಮೇಯರ್ ಆಗಿ ಕೆಲಸ ಮಾಡಿದ್ದರು. ಸ್ಟಾಲಿನ್ ಅವರ ತಂದೆ ಎಂ.ಕರುಣಾನಿಧಿ ಬದುಕಿರುವವರೆಗೂ ಡಿಎಂಕೆ ಪಕ್ಷ ಅಧಿನಾಯಕರಾಗಿದ್ದರು, ಹಾಗೂ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.

ಕರುಣಾನಿಧಿ ಸಾವಿನ ಬಳಿಕ ಪಕ್ಷದ ಚುಕ್ಕಾಣಿ ವಹಿಸಿಕೊಂಡ ಸ್ಟಾಲೀನ್ 10 ವರ್ಷಗಳ ಸುಧೀರ್ಘ ಹೋರಾಟದ ಬಳಿಕ ಏಪ್ರಿಲ್ 6ರಂದು ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತದ ಗಳಿಸಿದ್ದಾರೆ. 234 ಸ್ಥಾನಗಳ ತಮಿಳುನಾಡಿನಲ್ಲಿ ಡಿಎಂಕೆ 159 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿದಿದೆ.

ಮುಖ್ಯಮಂತ್ರಿಯಾಗಿರುವ ಸ್ಟಾಲೀನ್ ಗೃಹ, ಪೊಲೀಸ್ ಸೇವೆಗಳು, ಆಡಳಿತ, ವಿಶೇಷ ಚೇತರ ಕಲ್ಯಾಣ, ವಿಶೇಷ ಕಾರ್ಯಕ್ರಮಗಳ ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ.ದಿನವೊಂದಕ್ಕೆ 25 ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಸಂದರ್ಭದಲ್ಲಿ ಸ್ಟಾಲೀನ್ ಅಧಿಕಾರ ವಹಿಸಿಕೊಂಡಿದ್ದು, ಆಡಳಿತಾತ್ಮಕ ಸವಾಲುಗಳನ್ನು ಎದುರಿಸಬೇಕಿದೆ.

ಸಹೋದರಿ ಕನ್ನಿಮೋಳಿ ತಮ್ಮ ಸಹೋದರನ ಆಡಳಿತದ ಮೇಲೆ ವಿಶ್ವಾಸ ವ್ಯಕ್ತ ಪಡಿಸಿದ್ದು, ತಮಿಳುನಾಡನ್ನು ಕಾಡುತ್ತಿರುವ ಕೊರೊನಾ ಸೋಂಕನ್ನು ನಿವಾರಣೆ ಮಾಡಲು ನೂತನ ಮುಖ್ಯಮಂತ್ರಿಗಳು ಮೊದಲ ಆದ್ಯತೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ನೂತನ ಸಂಪುಟದ 33 ಸಚಿವರ ಪೈಕಿ ಯುವಕರಿಗೆ ಮತ್ತು ಅನುಭವಸ್ಥರಿಗೆ ಆದ್ಯತೆ ನೀಡಿದ್ದಾರೆ. ಇಬ್ಬರು ಮಹಿಳೆಯರಿಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕಟಪಾಡಿ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿರುವ ದುರೈಮುರುಗನ್ ರಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿದೆ. ಕಾವೇರಿ ಸೇರಿದಂತೆ ಅಂತರಾಜ್ಯ ನದಿ ವಿವಾದ ತಮಿಳುನಾಡಿನಲ್ಲಿ ಪ್ರಮುಖ ರಾಜಕೀಯ ವಿಷಯವಾಗಿರುವುದರಿಂದ ಹಾಗೂ ನಿರಂತರ ಬರ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಈ ಖಾತೆಗೆ ಹೆಚ್ಚಿನ ಮಹತ್ವ ಇದೆ.

ಚುನಾವಣೆ ಸಂದರ್ಭದಲ್ಲಿ ಸ್ಟಾಲೀನ್ ಬಡವರಿಗೆ 4 ಸಾವಿರ ಆಹಾರ ನೆರವು, ಮಹಿಳೆಯರಿಗೆ ಉಚಿತ ಪ್ರಯಾಣ ಹಾಗೂ ವರ್ಷಕ್ಕೆ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿರುವುದರಿಂದ ಹಣಕಾಸು ಇಲಾಖೆ ಅತ್ಯಂತ ಜವಾಬ್ದಾರಿಯುತವಾಗಿದ್ದಾಗಿದೆ, ಅದನ್ನು ಮಾಜಿ ಬ್ಯಾಂಕರ್ ಹಾಗೂ ಅಮೆರಿಕಾದಲ್ಲಿ ಕೆಲಸ ಮಾಡಿದ ಅನಭವ ಹೊಂದಿರುವ ಪಳನಿವೇಲ್ ತಂಗರಾಜನ್ ಅವರಿಗೆ ನೀಡಲಾಗಿದೆ.

ಕೋವಿಡ್ ಸೋಂಕಿನ ಅಬ್ಬರದ ನಡುವೆ ತಮಿಳುನಾಡಿನ ಆಸ್ಪತ್ರೆಗಳಲ್ಲೂ ಹಾಸಿಗೆ ಸೇರಿದಂತೆ ಹಲವಾರು ಸವಾಲುಗಳಿವೆ. ಅದಕ್ಕಾಗಿ ಆರೋಗ್ಯ ಖಾತೆ ನಿಭಾಯಿಸಲು ಚೆನೈನ ಮಾಜಿ ಮೇಯರ್ ಆಗಿ ಕೆಲಸ ಮಾಡಿದ್ದ ಎಂ.ಎ.ಸುಬ್ರಹ್ಮಣ್ಯ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಕೋವಿಡ್ ಸೋಂಕನ್ನು ನಿಯಂತ್ರಣಕ್ಕೆ ತರುವುದು, ಸೇರಿದಂತೆ ಹಲವಾರು ಸವಾಲುಗಳನ್ನು ನೂತನ ಸಚಿವರು ನಿಭಾಯಿಸಬೇಕಿದೆ.

ಖಾಸಗಿ ಆಸ್ಪತ್ರೆಗಳು ಕಡಿಮೆ ದರದಲ್ಲಿ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ನೀಡಬೇಕು ಎಂದು ಸ್ಟಾಲೀನ್ ಮನವಿ ಮಾಡಿಕೊಂಡಿದ್ದಾರೆ. ಎಸ್.ರಘುಪತಿ ಅವರಿಗೆ ಕಾನೂನು, ತಂಗಂ ತೇನರಸು ಅವರಿಗೆ ಕೈಗಾರಿಕೆ, ಕೆ.ಪನ್ನಮುಡಿ ಅವರಿಗೆ ಉನ್ನತ ಶಿಕ್ಷಣ, ಇ.ವಿ.ವೇಲು ಅವರಿಗೆ ಲೋಕೋಪಯೋಗಿ, ಎಸ್.ಮುತ್ತುಸ್ವಾಮಿ ಅವರಿಗೆ ವಸತಿ ಮತ್ತು ನಗರಾಭಿವೃದ್ಧಿ ಖಾತೆಗಳನ್ನು ವಹಿಸಲಾಗಿದೆ.

ತಮ್ಮ ಪುತ್ರ ಶಾಸಕನಾಗಿ ಆಯ್ಕೆಯಾಗಿದ್ದರು ಆತನಿಗೆ ಸ್ಟಾಲೀನ್ ಸಚಿವ ಸ್ಥಾನ ನೀಡಿಲ್ಲ. ಕೆಲವು ಖಾತೆಗಳಿಗೆ ನೂನತ ಮುಖ್ಯಮಂತ್ರಿಗಳು ಮರುನಾಮಕರಣವನ್ನ ಮಾಡಿದ್ದಾರೆ.

ಕೃಷಿ ಇಲಾಖೆಯನ್ನು ಕೃಷಿ ಮತ್ತು ರೈತರ ಕಲ್ಯಾಣ ಎಂದು ಬದಲಾವಣೆ ಮಾಡಲಾಗಿದೆ. ಐದು ಬಾರಿ ಶಾಸಕರಾಗಿರುವ ಎಂ.ಆರ್.ಕೆ.ಪನ್ನೀರ್ ಸೇಲ್ವಂ ಅವರಿಗೆ ಈ ಖಾತೆಯನ್ನು ವಹಿಸಲಾಗಿದೆ. ಶಿವ ಎಂ.ಮೆಯ್ಯನಾಥ್ ಅವರಿಗೆ ಪರಿಸರ, ಸಿ.ವಿ.ಗಣೇಶ್ ಅವರಿಗೆ ಕಾರ್ಮಿಕ ಕಲ್ಯಾಣ, ತಮಿಳುನಾಡು ಅನಿವಾಸಿ ಖಾತೆಯಾಗಿ ಬದಲಾಗಿರುವ ಅನಿವಾಸಿ ಭಾರತೀಯ ಖಾತೆಯನ್ನು ಕೆ.ಎಸ್.ಮಸ್ತಾನ್ ಅವರಿಗೆ ನೀಡಲಾಗಿದ್ದು, ಜೊತೆಗೆ ಅಲ್ಪಸಂಖ್ಯಾತ, ನಿರಾಶ್ರೀತರು ಮತ್ತು ವಕ್ಫ್ ಖಾತೆಗಳನ್ನು ನೀಡಲಾಗಿದೆ.

ಮೀನುಗಾರಿಕೆ ಖಾತೆಯ ಹೆಸರನ್ನು ಬದಲಾವಣೆ ಮಾಡಿದ್ದು, ಅದನ್ನು ಅನಿತಾ ಆರ್.ರಾಧಕೃಷ್ಣನ್ ಅವರಿಗೆ ನೀಡಲಾಗಿದೆ. ಜೊತೆಗೆ ಪಶುಸಂಗೋಪನೆಯನ್ನುನೀಡಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆಗೆ ಟಿ.ಮನೋ ತಂಗರಾಜ್ ಅವರನ್ನು ನಿಯೋಜಿಸಲಾಗಿದೆ.

Facebook Comments

Sri Raghav

Admin