ಶಾಸಕ ಭೈರತಿ ಸುರೇಶ್ ಮೇಲೆ ಹಲ್ಲೆಗೆ ಶಿವಕುಮಾರ್ ಯತ್ನಿಸಿದ್ದೇಕೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಮನೆ ಕಟ್ಟಲು ನನಗೆ ಹೆಚ್ಚಿನ ಹಣದ ಸಹಾಯ ಮಾಡಲಿಲ್ಲ ಎಂಬ ಕೋಪಕ್ಕೆ ಶಾಸಕ ಭೈರತಿ ಸುರೇಶ್ ಅವರ ಮೇಲೆ ಆರೋಪಿ ಶಿವಕುಮಾರ್ ಚಾಕುವಿನಿಂದ ಹಲ್ಲೆಗೆ ಯತ್ನಿಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಶಿವಕುಮಾರ್ ಕುಟುಂಬಸ್ಥರಿಗೆ ಶಾಸಕರು ಪರಿಚಯಸ್ಥರಾಗಿದ್ದು, ಇವರ ಕುಟುಂಬಕ್ಕೆ ನೆರವು ನೀಡಿದ್ದರು. ಶಿವಕುಮಾರ್ ಹಾಗೂ ಇವರ ಸಹೋದರ ಮನೆ ಕಟ್ಟಲು ಆರಂಭಿಸಿದ್ದರು.

ಶಾಸಕರು ಹಾಗೂ ಸರ್ಕಾರದಿಂದ ನೆರವು ಪಡೆದು ಸಹೋದರ ಚೆನ್ನಾಗಿ ಮನೆ ಕಟ್ಟಿಕೊಂಡಿದ್ದು, ಶಿವಕುಮಾರ್ ಮನೆ ಇನ್ನೂ ಪೂರ್ಣಗೊಂಡಿರಲಿಲ್ಲ. ಶಾಸಕರು ನನಗೆ ಮನೆ ಕಟ್ಟಿಕೊಳ್ಳಲು ಹೆಚ್ಚಿನ ಹಣದ ನೆರವು ನೀಡಲಿಲ್ಲ ಎಂದು ಕೋಪಗೊಂಡಿದ್ದ ಶಿವಕುಮಾರ್ ನಿನ್ನೆ ಮನೆಯಲ್ಲಿದ್ದ ಚಾಕುವನ್ನು ಜೊತೆಯಲ್ಲಿಟ್ಟುಕೊಂಡು ಬೈಕ್‍ನಲ್ಲಿ ಹೊರಗೆ ಹೋಗಿದ್ದನು.

ನಿನ್ನೆ ಬೆಳಗ್ಗೆ ಶಾಸಕರು ಬೈರತಿ ಗ್ರಾಮಕ್ಕೆ ತೆರಳಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಭೈರತಿ ಗ್ರಾಮದಿಂದ ಮಧ್ಯಾಹ್ನ ಕಾರಿನಲ್ಲಿ ತೆರಳುತ್ತಿದ್ದಾಗ ಆರೋಪಿ ಹಿಂಬಾಲಿಸಿ ಕಾರಿಗೆ ಬೈಕ್ ತಾಗಿಸಿದ್ದಾನೆ. ತಕ್ಷಣ ಚಾಲಕ ಕಾರನ್ನು ನಿಲ್ಲಿಸುತ್ತಿದ್ದಂತೆ ಶಿವಕುಮಾರ್ ಏಕಾಏಕಿ ಚಾಕುವಿನಿಂದ ಶಾಸಕರ ಮೇಲೆ ಹಲ್ಲೆಗೆ ಯತ್ನಿಸಿದಾಗ ಶಾಸಕರ ಗನ್‍ಮ್ಯಾನ್ ಹಾಗೂ ಆಪ್ತ ಸಹಾಯಕ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

Facebook Comments