ಕೆಎಂಎಫ್ ಅಧ್ಯಕ್ಷೀಯ ಚುನಾವಣೆ : ಸಿಎಂ ಭೇಟಿಯಾದ ಶಾಸಕ ಭೀಮಾನಾಯಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.22-ಮುಂದೂಡಿಕೆಯಾಗಿದ್ದ ಹಾಲು ಒಕ್ಕೂಟ (ಕೆಎಂಎಫ್)ದ ಅಧ್ಯಕ್ಷೀಯ ಚುನಾವಣೆಯನ್ನು ಆದಷ್ಟು ಶೀಘ್ರದಲ್ಲಿ ನಡೆಸಬೇಕೆಂದು ಶಾಸಕ ಭೀಮಾನಾಯಕ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಬೆಳಗ್ಗೆ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಸಿಎಂ ಬಿಎಸ್‍ವೈ ಅವರನ್ನು ಭೇಟಿ ಮಾಡಿದ ಭೀಮಾನಾಯಕ್, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕೆಂದು ಮನವಿ ಮಾಡಿದರು.

ಈ ಹಿಂದೆ ನಡೆಯಬೇಕಿದ್ದ ಚುನಾವಣೆಯನ್ನು ಕೆಲವು ಕಾರಣಗಳಿಂದ ಮುಂದೂಡಲಾಗಿತ್ತು. ಸಹಕಾರ ಇಲಾಖೆಯ ಅಧಿಕಾರಿಗಳು ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಯಡಿಯೂರಪ್ಪ ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ಯಾವ ಕಾರಣಕ್ಕಾಗಿ ಚುನಾವಣೆ ಮುಂದೂಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರಸರ್ಕಾರ ಪತನವಾದ ನಂತರ ಕೆಎಂಎಫ್‍ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಮಾಜಿ ಸಚಿವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು.

ಇದೇ ವೇಳೆ ಬಳ್ಳಾರಿ ಜಿಲ್ಲೆ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯಕ್ ಕೂಡ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಮೈತ್ರಿ ಸರ್ಕಾರದ ಒಪ್ಪಂದದಂತೆ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಬೇಕಿತ್ತು. ಆದರೆ ರೇವಣ್ಣ ಪಟ್ಟು ಹಿಡಿದ ಕಾರಣ ಚುನಾವಣೆಯನ್ನೇ ಮುಂದೂಡಲಾಗಿತ್ತು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ಒಂದೆರಡು ದಿನದಲ್ಲಿ ಚುನಾವಣೆ ನಡೆಯಬೇಕು ಎನ್ನುವಷ್ಟರಲ್ಲಿ ಎಚ್.ಡಿ.ರೇವಣ್ಣ ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಕೆಲವು ನಿರ್ದೇಶಕರನ್ನು ಹೈದರಾಬಾದ್ ರೆಸಾರ್ಟ್‍ಗೆ ಕೊಂಡೊಯ್ದಿದ್ದರು. ಹೀಗಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಮುಂದೂಡಿತ್ತು.

Facebook Comments

Sri Raghav

Admin