ಬಳಕೆಯಾಗದ ಅನುದಾನ, ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಗಿಂತ ರಾಜಕೀಯವೇ ಹೆಚ್ಚಾಯ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.24- ಸಿಎಂ ಅನುದಾನ ಕೊಡುತ್ತಿಲ್ಲ ಎಂದು ಪದೇ ಪದೇ ಹೇಳುತ್ತಿದ್ದ ಶಾಸಕರ ಅಸಲಿಯತ್ತೇ ಬೇರೆಯಾಗಿದ್ದು, ಖುದ್ದು ಸಿಎಂ ಅವರೇ ಅನುದಾನ ತೆಗೆದುಕೊಳ್ಳಿ ಎನ್ನುತ್ತಿದ್ದರೂ ಶಾಸಕರು ಅನುದಾನವನ್ನು ಬಳಸುತ್ತಿಲ್ಲ. ನಿಧಿಯ ಕ್ಷೇತ್ರಾಭಿವೃದ್ಧಿ ಅನುದಾನ ಪಡೆಯಲು ಸ್ವತಃ ಅವರೇ ಆಸಕ್ತಿ ತೋರದಿರುವುದು ವಿಪರ್ಯಾಸವಾಗಿದೆ.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರತಿ ವರ್ಷ ಅಭಿವೃದ್ಧಿ ಕೆಲಸಗಳಿಗಾಗಿ 2 ಕೋಟಿ ರೂ.ವರೆಗೆ ಹಣ ಪಡೆಯಬಹುದಾಗಿದೆ. ಆದರೆ 31 ವಿಧಾನಸಭೆ ಸದಸ್ಯರು ಹಾಗೂ 36 ವಿಧಾನ ಪರಿಷತ್ ಸದಸ್ಯರು ಇದುವರೆಗೂ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ,  ಮಾಜಿ ಸಿಎಂ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಸೇರಿದಂತೆ ಇತರ ಶಾಸಕರು ಅನುದಾನದಣವನ್ನು ಪೂರ್ಣವಾಗಿ ಬಳಸಿಕೊಂಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಶಾಸಕರ ನಿಧಿಯ ಅನುದಾನ ಪಡೆದುಕೊಳ್ಳಿ ಎಂದು ಖುದ್ದು ಸಿಎಂ ಪತ್ರ ಬರೆದಿದ್ದಾರೆ. ಸಿಎಂ ಪತ್ರ ಬರೆದರೂ ಕ್ಷೇತ್ರಾಭಿವೃದ್ಧಿ ಅನುದಾನ ಪಡೆಯಲು ಶಾಸಕರು ಉತ್ಸಾಹ ತೋರುತ್ತಿಲ್ಲ. 60ಕ್ಕೂ ಹೆಚ್ಚು ಎಂಎಲ್‍ಎ ಮತ್ತು ಎಂಎಲ್‍ಸಿಗಳು ಕಳೆದ ವರ್ಷ ಪ್ರದೇಶಾಭಿವೃದ್ಧಿ ನಿಧಿಯ ಅನುದಾನ ಪಡೆದೇ ಇಲ್ಲ. ಹೀಗಾಗಿ ಶಾಸಕರ ನಿಧಿಯಲ್ಲಿ ನೂರಾರು ಕೋಟಿ ಹಣ ಕೊಳೆಯುತ್ತಿದೆ.

ಸಿಎಂ ಪತ್ರದ ಪ್ರಕಾರ ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಐದು ಅಭಿವೃದ್ದಿ ಕೆಲಸಗಳಿಗಾಗಿ 22 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಿದ್ದರು. ಅವರು 2 ಕೋಟಿ ರೂವರೆಗೆ ಅನುದಾನ ಪಡೆದುಕೊಳ್ಳಬಹುದಾಗಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳು ಪತ್ರ ಬರೆದಿದ್ದು ಪ್ರದೇಶಾಭಿವೃದ್ಧಿ ಹಣ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕರಿಗೆ ತಿಳಿಸಿದ್ದಾರೆ. ಹೀಗಾಗಿ ಶಾಸಕರ ನಿಧಿಯಲ್ಲಿ ನೂರಾರು ಕೋಟಿ ಹಣ ಕೊಳೆಯುತ್ತಿದೆ. ಇದರಿಂದ ಈ ಶಾಸಕರಿಗೆ ನಿಜಕ್ಕೂ ಕ್ಷೇತ್ರದ ಅಭಿವೃದ್ಧಿ ಬೇಕಿಲ್ವಾ?, ಶಾಸಕರಿಗೆ ಕ್ಷೇತ್ರದ ಪ್ರಗತಿಗಿಂತ ರಾಜಕೀಯವೇ ಹೆಚ್ಚಾಯ್ತಾ? ಜೊತೆಗೆ ಸರ್ಕಾರ ಬೀಳಿಸುವುದರಲ್ಲೇ ಬ್ಯುಸಿಯಾಗಿದ್ದಾರೆಯೇ ಮೈತ್ರಿ ಶಾಸಕರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

Facebook Comments