“ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ಶಾಸಕ ನಾಪತ್ತೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.27: ಗಾಂಧಿನಗರ ಕ್ಷೇತ್ರದ ರಸ್ತೆಗಳ ತುಂಬಾ ಗುಂಡಿಗಳು ಬಿದ್ದು ಜನರು ಪರದಾಡುತ್ತಿದ್ದರೆ, ಶಾಸಕ ದಿನೇಶ್ ಗುಂಡೂರಾವ್‍ರವರು ಸಮಸ್ಯೆ ಆಲಿಸಿ ಪರಿಹರಿಸುವ ಬದಲು ಕಾಣೆಯಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದ್ದಾರೆ.

ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಜನರು ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್‍ರವರನ್ನು ನೆನಪಿಸಿಕೊಂಡು ದಿನೇಶ್ ಗುಂಡೂರಾವ್‍ರವರನ್ನು ಶಾಸಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಆದರೆ ಕ್ಷೇತ್ರದ ಮೇಲೆ ಅವರಿಗಿರುವ ಅಸಡ್ಡೆಯಿಂದಾಗಿ ಅವರ ತಂದೆಯ ಹೆಸರಿಗೆ ಧಕ್ಕೆಯಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಸಂಪೂರ್ಣ ಕಡೆಗಣಿಸಿ ಹೊರರಾಜ್ಯಗಳಲ್ಲೇ ಠಿಕಾಣಿ ಹೂಡುತ್ತಿದ್ದಾರೆ.

ಗಾಂಧಿನಗರದ ಶಾಸಕ ಸ್ಥಾನಕ್ಕಿಂತ ಗೋವಾ ಮತ್ತು ತಮಿಳುನಾಡಿನ ಕಾಂಗ್ರೆಸ್ ಉಸ್ತುವಾರಿಯೇ ಅವರಿಗೆ ಮುಖ್ಯವಾಗಿದೆ. ಪರಿಣಾಮವಾಗಿ ಮತ ನೀಡಿದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.  ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿರುವ ದಿನೇಶ್ ಗುಂಡೂರಾವ್‍ರವರನ್ನು ಸಾಮಾಜಿಕ ತಾಣಗಳಲ್ಲಿ ಪ್ರಶ್ನಿಸಿದರೆ, ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಚುನಾವಣೆ ವೇಳೆ ಆಶ್ವಾಸನೆಗಳನ್ನು ನೀಡಿ ಗೆದ್ದು, ಅಧಿಕಾರ ಸಿಕ್ಕ ನಂತರ ಅಸಹಾಯಕತೆ ವ್ಯಕ್ತಪಡಿಸುವ ಅವರಿಗೆ ನಾಚಿಕೆಯಾಗಬೇಕು. ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವೇ ಹೊರತು ಬೇರೇನೂ ಅಲ್ಲ.  ನೆರೆ ರಾಜ್ಯಗಳಿಗೆ ಪಲಾಯನ ಮಾಡಿರುವ ಅವರು ಇನ್ನಾದರೂ ವಾಪಸ್ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ. ಸಾಧ್ಯವಾಗದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ಏನಾದರೂ ಮಾಡಿಕೊಳ್ಳಲಿ ಎಂದು ಮೋಹನ್ ದಾಸರಿಯವರು ದಿನೇಶ್ ಗುಂಡೂರಾವ್‍ರವರನ್ನು ತರಾಟೆಗೆ ತೆಗೆದುಕೊಂಡರು.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಕಾಪೆರ್ರೇಟರ್‍ಗಳು ಹಾಗೂ ಕಾರ್ಯಕರ್ತರ ಆಟಾಟೋಪ ಮೀತಿಮೀರಿದ್ದು, ಕ್ಷೇತ್ರದ ಸಮಸ್ಯೆಗಳನ್ನು ಪ್ರಶ್ನಿಸುವ ಆಮ್ ಆದ್ಮಿ ಪಾರ್ಟಿ ಮುಖಂಡರಿಗೆ ಧಮಕಿ ಹಾಕುತ್ತಿದ್ದಾರೆ. ಅವರ ಗೂಂಡಾಗಿರಿ ಇದೇ ರೀತಿ ಮುಂದುವರಿದರೆ ? ದಿನೇಶ್ ಗುಂಡೂರಾವ್ ಹಠಾವೋ? ಆಂದೋಲನದ ಮೂಲಕ ಜನರ ಬಳಿ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕಾನೂನು ಸಮರಕ್ಕೆ 57 ವಕೀಲರು: ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ವಕೀಲರ ಘಟಕದ ಅಧ್ಯಕ್ಷ ಮಂಜುನಾಥ ಸ್ವಾಮಿಯವರು ಮಾತನಾಡಿ, ರಸ್ತೆಗುಂಡಿಗಳಿಗೆ ಕಾರಣರಾದ ಅಧಿಕಾರಿಗಳು ಹಾಗೂ ಜನಪ್ರತಿನಿಗಳ ವಿರುದ್ಧ ಪ್ರಕರಣ ದಾಖಲಿಸಲು 57 ಅನುಭವಿ ವಕೀಲರ ತಂಡವನ್ನು ರಚಿಸಲಾಗಿದೆ. ಸದ್ಯದಲ್ಲೇ 150ಕ್ಕೂ ಹೆಚ್ಚು ವಕೀಲರು ನಮ್ಮೊಂದಿಗೆ ಕೈಜೋಡಿಸುವ ಸಾಧ್ಯತೆಯಿದೆ. ಕರ್ತವ್ಯದಲ್ಲಿ ಲೋಪ ಎಸಗಿದ ಹಾಗೂ ಅಕ್ರಮದಲ್ಲಿ ಭಾಗಿಯಾದವರು ತಕ್ಕ ಬೆಲೆ ತೆರುವಂತೆ ಮಾಡುತ್ತೇವೆ ಎಂದು ಹೇಳಿದರು.

Facebook Comments