ಕೆ.ಎನ್.ರಾಜಣ್ಣ ಜೊತೆ ಡಿ.ಕೆ.ಶಿವಕುಮಾರ್ ಮಹತ್ವದ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.14- ಶಿರಾ ವಿಧಾನಸಭೆ ಚುನಾವಣೆಯ ಕಾವು ಏರುತ್ತಿದ್ದು, ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ಆಗಮಿಸಿದ ರಾಜಣ್ಣ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ರಾಜಣ್ಣ ಕಾಂಗ್ರೆಸ್ ತೊರೆದು ಬೇರೆ ಪಕ್ಷದಿಂದ ಅಥವಾ ಬಂಡಾಯ ಅಭ್ಯರ್ಥಿಯಾಗಿ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳಿದ್ದವು.

ಈ ಬಗ್ಗೆ ನಿನ್ನೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಕೊರೊನಾದಿಂದ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವ ಡಿ.ಕೆ.ಶಿವಕುಮಾರ್ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ರಾಜಣ್ಣ ಅವರ ಜೊತೆ ಚರ್ಚೆ ನಡೆಸಿದ್ದಾರೆ.

ತುಮಕೂರು ಜಿಲ್ಲಾ ರಾಜಕಾರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರೊಂದಿಗೆ ಮೊದಲಿನಿಂದಲೂ ಮುನಿಸನ್ನು ಹೊಂದಿರುವ ರಾಜಣ್ಣ ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಎದುರಾಳಿಯಾಗಬಹುದು ಎಂಬ ಆತಂಕ ಇದೆ. ಹಾಗಾಗಿ ಪ್ರಮುಖರು ರಾಜಣ್ಣ ಅವರ ಮನವೋಲಿಕೆ ಯತ್ನ ನಡೆಸುತ್ತಿದ್ದಾರೆ.

Facebook Comments