“15 ದಿನಗಳ ಹಿಂದೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ” : ಸಾ.ರಾ.ಮಹೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.16-ನನ್ನ ವೈಯಕ್ತಿಕ ವಿಷಯಗಳ ಕುರಿತು ಟೀಕೆ ಮಾಡಿದ ಹಿನ್ನೆಲೆಯಲ್ಲಿ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಎಚ್.ವಿಶ್ವನಾಥ್ ಹಾಗೂ ನನ್ನ ನಡುವೆ ವಾಕ್ಸಮರ ನಡೆಯುತ್ತಲೇ ಇದೆ.

ವಿಶ್ವನಾಥ್ ಅವರು ನನ್ನ ವೈಯಕ್ತಿಕ ವಿಷಯಗಳ ಕುರಿತು ಕೆಟ್ಟ ಶಬ್ಧಗಳಿಂದ ಮಾತನಾಡಿದ್ದಾರೆ. ಇದರಿಂದ ಬೇಸರಗೊಂಡು 15 ದಿನಗಳ ಹಿಂದೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ಸ್ಪೀಕರ್ ಅವರು ಇನ್ನೂ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂದು ತಿಳಿಸಿದರು. ರಾಜಕೀಯದಲ್ಲಿ ಕೇವಲ ರಾಜಕೀಯ ವಿಷಯಗಳನ್ನು ಮಾತ್ರ ಮಾತನಾಡಬೇಕು.

ಅದು ಬಿಟ್ಟು ವೈಯಕ್ತಿಕ ವಿಷಯಗಳನ್ನು ಯಾರೂ ಕೂಡ ಮಾತನಾಡಬಾರದು. ಆದರೆ ವಿಶ್ವನಾಥ್ ಮಾತನಾಡಿದ್ದಾರೆ. ಇದು ನನಗೆ ಬಹಳ ಬೇಸರ ತಂದಿದೆ. ಇನ್ನು ಮುಂದೆ ವಿಶ್ವನಾಥ್ ಸೇರಿದಂತೆ ಯಾರ ಬಗ್ಗೆಯೂ ವೈಯಕ್ತಿಕ ವಿಷಯಗಳನ್ನು ಮಾತನಾಡುವುದಿಲ್ಲ ಎಂದು ಹೇಳಿದರು. ಸೆಪ್ಟೆಂಬರ್‍ನಲ್ಲಿ ರಾಜೀನಾಮೆ ಕೊಟ್ಟಿದ್ದೆ. ರಾಜೀನಾಮೆ ಪತ್ರ ಸ್ಪೀಕರ್ ಕಚೇರಿಯಲ್ಲೇ ಇದೆ. ರಾಜೀನಾಮೆ ಅಂಗೀಕರಿಸುವುದು ಬಿಡುವುದು ಸ್ಪೀಕರ್‍ಗೇ ಬಿಟ್ಟ ವಿಷಯ ಎಂದು ಸಾ.ರಾ.ಮಹೇಶ್ ತಿಳಿಸಿದರು.

ನಾನು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದೇನೆ. ಇದು ನನ್ನ ಜೀವನ ಅದನ್ನು ಹೊರತುಪಡಿಸಿ ಬೇರೆ ವಿಷಯಗಳ ಬಗ್ಗೆ ಯಾರೇ ಮಾತನಾಡಲಿ ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ ಎಂದರು. ಎಚ್.ವಿಶ್ವನಾತ್ ಅವರ ಪುತ್ರ ಮೈಸೂರಿನ ಇಲವಾಲದಲ್ಲಿ ಪತ್ರಕರ್ತ ರವಿಬೆಳಗೆರೆ ಅವರ ಅಳಿಯ ಶ್ರೀನಗರ ಕಿಟ್ಟಿ ಅವರೊಂದಿಗೆ ಸೇರಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿಲ್ಲವೇ ಎಂದು ಸಾ.ರಾ.ಮಹೇಶ್ ಪ್ರಶ್ನಿಸಿದರು.

Facebook Comments