ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಅಸ್ಪೃಶ್ಯತೆ ಚರ್ಚೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.6- ಗ್ರಾಮೀಣ ಭಾಗದಲ್ಲಿ ಸಂಪೂರ್ಣವಾಗಿ ನಿಷೇಧವಾಗದ ಅಸ್ಪೃಶ್ಯತೆ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಗಂಭೀರ ಚರ್ಚೆಗೆ ಎಡೆ ಮಾಡಿಕೊಟ್ಟಿತು. ಭಾರತದ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿಎಸ್‍ಪಿ ಶಾಸಕ ಎನ್.ಮಹೇಶ್ ಅವರು, ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರವಾಗಿದ್ದರೂ ಶೇ.70ರಷ್ಟು ಹಳ್ಳಿಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜೀವಂತವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವ ಪ್ರಮಾಣ ತೀರಾ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಗ ಮಧ್ಯಪ್ರವೇಶಿಸಿದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ, ತಾವು ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ತಮ್ಮ ಮಿತ್ರನ ಮನೆಯಲ್ಲಿ ಊಟ ಮಾಡಿದ ವಿಚಾರವನ್ನು ಪ್ರಸ್ತಾಪಿಸಿ, ಜಾತಿ ವ್ಯವಸ್ಥೆ ಜೀವಂತವಾಗಿರುವುದಕ್ಕೆ ನಾವೆಲ್ಲ ತಲೆ ತಗ್ಗಿಸಬೇಕು ಎಂದರು.  ಆಗ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಕಾನೂನಿಗಿಂತ ಸಂಪ್ರದಾಯವೇ ಆಡಳಿತ ನಡೆಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಮಾತನಾಡಿ, ತಾವು ವೈದ್ಯರಾಗಿದ್ದು, ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಜಾತಿ ನೋಡುವುದಿಲ್ಲ. ರಕ್ತ ಬಳಸುವಾಗ ಜಾತಿ ನೋಡುವುದಿಲ್ಲ. ಯುವ ಸಮುದಾಯದಲ್ಲಿ ಜಾತಿ ಧರ್ಮ ಯಾರೂ ಕೇಳುತ್ತಿಲ್ಲ. ನಮ್ಮಲ್ಲಿ ಬದಲಾವಣೆಯಾಗಬೇಕು, ದೌರ್ಜನ್ಯ ಪ್ರಕರಣಗಳ ಪರಿಶೀಲನೆಯೂ ಆಗಬೇಕು ಎಂದರು.  ಮತ್ತೊಬ್ಬ ಶಾಸಕ ಗಣೇಶ್ ಮಾತನಾಡಿ, ಕೆಲವು ಕಡೆ ಹೋಟೆಲ್‍ನಲ್ಲಿ ಈಗಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗ್ಲಾಸ್ ಇಟ್ಟಿದ್ದಾರೆ. ಬದಲಾವಣೆಯಾಗಬೇಕಿದೆ ಎಂದಾಗ, ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ನಮ್ಮಲ್ಲಿ ಎಲ್ಲೂ ಆ ರೀತಿ ಇಲ್ಲ ಎಂದರು.

ಇದಕ್ಕೆ ಆಕ್ಷೇಪವೆಂಬಂತೆ ಮಾತನಾಡಿದ ಜೆಡಿಎಸ್ ಮತ್ತೊಬ್ಬ ಶಾಸಕ ಡಾ.ಅನ್ನದಾನಿ, ಮೆಡಿಕಲ್ ಕಾಲೇಜ್‍ವೊಂದರಲ್ಲಿ ನನ್ನ ಮಗ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಜೊತೆಯಲ್ಲೇ ಕುಳಿತು ಕಾಫಿ ತಿಂಡಿ ತಿನ್ನುತ್ತಿದ್ದ ವಿದ್ಯಾರ್ಥಿನಿಯೊಬ್ಬರು ನನ್ನ ಮಗನ ಜಾತಿ ಕೇಳಿದ್ದಾರೆ ಆತ ಯಾವುದೇ ಕೀಳರಿಮೆ ಇಲ್ಲದೆ ಪರಿಶಿಷ್ಟ ಜಾತಿಗೆ ಸೇರಿದವನು ಎಂದು ಹೇಳಿದ್ದಾನೆ. ಆದಾದ ಮೇಲೆ ಎದುರಿಗೆ ಸಿಕ್ಕಿದರೂ ಮಾತನಾಡುತ್ತಿಲ್ಲವಂತೆ. ಗಣೇಶ್ ಹೇಳುತ್ತಿರುವುದು ಸುಳ್ಳಲ್ಲ. ಸಂಸದರೊಬ್ಬರು ಜೊತೆಯಲ್ಲಿ ಲೋಟ ಇಟ್ಟುಕೊಂಡು ಓಡಾಡುತ್ತಿದ್ದ ವಿಚಾರ ಮಾಧ್ಯಮಗಳ ಮೂಲಕ ಬಹಿರಂಗವಾಗಿಲ್ಲವೇ ಎಂದು ಪ್ರಶ್ನಿಸಿದರು.

ಸಾಮಾಜಿಕ ಸಮಾನತೆ ಬಂದಿಲ್ಲ. ಮಾತೇ ಬೇರೆ ಕೃತಿಯೇ ಬೇರೆ ಎಂದು ಹೇಳಿದರು. ಜೆಡಿಎಸ್  ಶಾಸಕ ಡಾ.ಶ್ರೀನಿವಾಸ್ ಮೂರ್ತಿ ಮಾತನಾಡಿ, 2008ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಸೊಂಟ ಮುರಿದುಕೊಂಡಿದ್ದ ವ್ಯಕ್ತಿಗೆ ಹಣ ಖರ್ಚು ಮಾಡಿ ಚಿಕಿತ್ಸೆ ಮಾಡಿಸಲಾಯಿತು.

ಆ ವ್ಯಕ್ತಿ ಮನೆಗೆ ಹೋದಾಗ ನಮ್ಮನ್ನು ಸ್ಪರ್ಶ ಸಮುದಾಯಕ್ಕೆ ಸೇರಿದವರಲ್ಲ ಹಾಗಾಗಿ ಬೇರೆ ಅಭ್ಯರ್ಥಿಗೆ ಮತ ಹಾಕುವುದಾಗಿ ಹೇಳಿದರು ಎಂದು ತಾವು ಅನುಭವಿಸಿದ ನೋವಿನ ಕಥೆಯನ್ನು ಸದನದ ಗಮನಕ್ಕೆ ತಂದರು.  ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಸಾಕಷ್ಟು ಸುಧಾರಣೆಯಾಗಿದೆ. ಅಸ್ಫೃಶ್ಯತೆ ನಿವಾರಣೆಯಾಗಿದೆ. ಅಲ್ಲೊಂದು ಇಲ್ಲೊಂದು ಪ್ರಕರಣಗಳಿವೆ. ಅದನ್ನು ಸರಿಪಡಿಸಬೇಕಿದೆ. ಅಸ್ಪೃಶ್ಯತೆ ನಿವಾರಣೆಗೆ ಕಾನೂನಿದೆ ಎಂದರು.

ಆಗ ಮತ್ತೆ ಮಾತನಾಡಿದ ಮಹೇಶ್ ಅವರು ಸಮಾಜದಲ್ಲಿ ಬದಲಾವಣೆಯಾಗುತ್ತಿಲ್ಲ ಎಂದು ಹೇಳಿಲ್ಲ. ಆದರೆ ಕೆಲವೆಡೆ ಇನ್ನು ಜೀವಂತವಾಗಿದೆ ಎಂಬುದನ್ನು ಗಮನಕ್ಕೆ ತಂದಿದ್ದೇನೆ ಎಂದು ಹೇಳಿದಾಗ ಈ ವಿಚಾರದ ಚರ್ಚೆಗೆ ತೆರೆ ಬಿದ್ದಿತು.

Facebook Comments