ಈ ಬಾರಿ ಮಂತ್ರಿಯಾಗ್ತಾರಾ ಪ್ರೀತಂ ಗೌಡ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.12- ಕೆಆರ್‌ಪೇಟೆಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವೇಳೆ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಸನ ಶಾಸಕ ಪ್ರೀತಂಗೌಡಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ.  ಪ್ರೀತಂ ಗೌಡ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದರೆ ಮೈಸೂರು ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಅನುಕೂಲವಾಗಲಿದ್ದು, ಸಂಪುಟ ವಿಸ್ತರಣೆಯಾದರೆ ಅವರನ್ನು ಪರಿಗಣಿಸಬೇಕೆಂದು ಮುಖ್ಯಮಂತ್ರಿ ಮೇಲೆ ಕೆಲವರು ಒತ್ತಡ ಹಾಕಿದ್ದಾರೆ.

ಮೊದಲ ಬಾರಿಗೆ ಶಾಸಕರಾದರೂ ಪಕ್ಷ ಸಂಘಟನೆಯಲ್ಲಿ ಅವರ ಸೇವೆಯನ್ನು ಕಡೆಗಣಿಸುವಂತಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಭದ್ರಕೋಟೆಯನ್ನು ಛಿದ್ರ ಮಾಡುವುದರಲ್ಲಿ ಪ್ರೀತಂ ಗೌಡ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ವಾದ ಸರಣಿಯನ್ನು ಮುಂದಿಟ್ಟಿದ್ದಾರೆ.  ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ವಿ.ಮುರುಳೀಧರ್ ರಾವ್ ಸೇರಿದಂತೆ ಮತ್ತಿತರರನ್ನು ಕೆಲವು ಭೇಟಿಯಾಗಿ ಮಂತ್ರಿ ಸ್ಥಾನಕ್ಕೆ ಪ್ರೀತಂ ಗೌಡ ಅವರನ್ನುಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.

ಮುಖ್ಯವಾಗಿ ಹಳೇಮೈಸೂರು ಭಾಗದ ತುಮಕೂರು, ಹಾಸನ, ಮಂಡ್ಯ, ಚಾಮರಾಜನಗರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಬಿಜೆಪಿ ಸಂಘಟನೆಯ ಕೊರತೆ ಎದುರಿಸುತ್ತಿದೆ. ಒಕ್ಕಲಿಗ ಸಮುದಾಯಗಳು ಪ್ರಾಬಲ್ಯವಿರುವ ಈ ಭಾಗದಲ್ಲಿ ಪ್ರೀತಂ ಗೌಡ ಸಚಿವರಾದರೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಅನುಕೂಲವಾಗುತ್ತದೆ ಎಂದು ಕೆಲ ಮುಖಂಡರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈವರೆಗೂ ಗೆಲ್ಲಲು ಸಾಧ್ಯವೇ ಇಲ್ಲದಿದ್ದ ಕೆಆರ್‍ಪೇಟೆ ಮತ್ತು ಶಿರಾದಲ್ಲಿ ಅವರು ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಜೊತೆ ಕೈ ಜೋಡಿಸಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.  ಎಲ್ಲ ಸಮುದಾಯವನ್ನು ಸೆಳೆಯುವ ಚಾಕಚಕ್ಯತೆಯೂ ಇದೆ. ಅಲ್ಲದೆ ಯಾರನ್ನೂ ಬೇಕಾದರೂ ಎದುರಿಸುವ ಧೈರ್ಯವನ್ನು ಹೊಂದಿದ್ದಾರೆ. ಹೀಗಾಗಿ ಪ್ರೀತಂ ಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಕೇಳಿಬರುತ್ತಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಟಿ.ರವಿ ಅವರು ನೇಮಕವಾಗಿದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಒಕ್ಕಲಿಗ ಸಮುದಾಯದಿಂದ ಮಂತ್ರಿ ಸ್ಥಾನ ನೀಡುವುದಾದರೆ ಪ್ರೀತಂ ಗೌಡ ಅವರನ್ನು ಪರಿಗಣಿಸಬೇಕೆಂದು ಕೋರಿದ್ದಾರೆ.

ದೀಪಾವಳಿ ನಂತರ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಏಕಕಾಲದಲ್ಲಿ ನಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಪ್ರೀತಂಗೌಡ ಅವರಿಗೆ ಈ ಬಾರಿ ಅದೃಷ್ಟ ಖುಲಾಯಿಸಿದರೂ ಅಚ್ಚರಿ ಇಲ್ಲ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

Facebook Comments