‘ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಬಿಎಸ್ ವೈ ಸಿಎಂ ಆಗಿ ಮುದುವರೆಯೋದು ಅಷ್ಟೇ ಸತ್ಯ’

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ : ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮುಂದಿನ ಅವಧಿಗೂ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಅಷ್ಟೇ ಸತ್ಯ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್ ಗೌಡ ಸ್ಪಷ್ಟಪಡಿಸಿದರು. ನಗರದಲ್ಲಿ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಯಕತ್ವ ಬದಲಾವಣೆ ವಿಷಯದಲ್ಲಿ ಬಿಜೆಪಿಯ 120ಕ್ಕೂ ಹೆಚ್ಚು ಶಾಸಕರು ಸಮ್ಮತಿಸಿಲ್ಲ, ಮುಂದಿನ ಎರಡುವರೆ ವರ್ಷವೂ ಸಹ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದಾರೆ ಎಂದರು. ಅಲ್ಲದೆ ಮುಂದಿನ ಚುನಾವಣೆಯನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪಕ್ಷ ಹೋರಾಟ ನಡೆಸಲಿದೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.

ಇದುವರೆಗೆ ನಾನು ನುಡಿದ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲ ಇಂದು ಸಹ ಹೇಳುತ್ತಿದ್ದೇನೆ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬದಲಾವಣೆ ಇಲ್ಲ ಎಂದು ಪುನರುಚ್ಚರಿಸಿದರು.
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಮಾಧ್ಯಮಗಳು ಮಾತ್ರ ಸೃಷ್ಟಿಸುತ್ತಿರುವ ಗೊಂದಲವಾಗಿದೆ ಮಾಧ್ಯಮದಿಂದಲೇ ಹುಟ್ಟಿರುವ ಈ ವದಂತಿ ಮುಂದಿನ ದಿನಗಳಲ್ಲಿ ರಾಜ್ಯ ಜನತೆಗೆ ಸ್ಪಷ್ಟವಾಗಲಿದೆ ಎಂದು ಹೇಳಿದರು.

ಸಿಎಂ ಯಡಿಯೂರಪ್ಪ ಅವರು ದೆಹಲಿ ಪ್ರವಾಸಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ರಾಜ್ಯದ ಆರ್ಥಿಕತೆ ದೃಷ್ಟಿಯಿಂದ ಕೇಂದ್ರ ಸಚಿವರಾದ ನಿರ್ಮಲಾ ಸೇತುರಾಮ್ ಸೇರಿದಂತೆ ಇತರೆ ಸಚಿವರನ್ನು ಭೇಟಿ ಮಾಡಿ ಸಾಲ ಪಡೆಯಲು ಹಾಗೂ ರಾಜ್ಯ ಆರ್ಥಿಕತೆ ಉತ್ತೇಜನಕ್ಕೆ ಕ್ರಮವಹಿಸಲು ದೆಹಲಿ ಪ್ರಯಾಣ ಬಳಸಿದ್ದಾರೆ ಅಷ್ಟೇ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಷಯವಾಗಿ ರಾಜ್ಯದ ಪಕ್ಷದ ಅಧ್ಯಕ್ಷರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತೀರ್ಮಾನದಂತೆ ರಚನೆಯಾಗಲಿದೆ ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಹೇಳಿದ ಅವರು ಸಂಪುಟ ರಚನೆ ಅಥವಾ ಪುನರ್ರಚನೆ ವಿಚಾರವಾಗಿ ಸಿಎಂ ಅವರೇ ಸ್ಪಷ್ಟೀಕರಣ ನೀಡಲಿದ್ದಾರೆ ಎಂದರು.

ಬಿಜೆಪಿ ಪಕ್ಷದಲ್ಲಿ ಸೂಪರ್ ಸಿಎಂ ಎಂಬ ಮಾತು ಇಲ್ಲ ಆದರೆ ಕೆಲ ನಾಯಕರು ವಿಜಯೇಂದ್ರ ಅವರನ್ನು ಸೂಪರ್ ಸಿಎಂ ಎಂದು ಹೇಳುತ್ತಿದ್ದಾರೆ ವಿಜಯೇಂದ್ರ ಅವರ ಬೆಳವಣಿಗೆಯನ್ನು ಸಹಿಸದೆ ಅವರಿಗೆ ಈ ಪಟ್ಟ ನೀಡಿದ್ದು ಮುಂದಿನ ದಿನಗಳಲ್ಲಿ ಸೂಪರ್ ಸಿಎಂ ಆಗುವ ಬದಲು ಸ್ವತಃ ಅವರೇ ರಾಜ್ಯದ ಸಿಎಂ ಆಗಿ ರಾಜ್ಯದಲ್ಲಿ ಆಡಳಿತ ನಡೆಸಲಿದ್ದಾರೆ ಎಂದು ಭವಿಷ್ಯ ನುಡಿದರು.
ರಾಜ್ಯದ ಹಲವು ಕ್ಷೇತ್ರಗಳಲ್ಲಿ ಚುನಾವಣೆ ವೇಳೆ ವಿಜಯೇಂದ್ರ ಅವರ ಓಡಾಟ ಹಾಗೂ ಕಾರ್ಯವೈಕರಿ ನೋಡಲು ಇತರೆ ಪಕ್ಷದವರಿಂದ ಸಹಿಸಲಾಗುತ್ತಿಲ್ಲ ಆದ್ದರಿಂದ ಅವರಿಗೆ ಈ ರೀತಿ ಸುಪರ್ ಸಿಎಂ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು‌.

Facebook Comments