ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಲು ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.2- ರಾಜ್ಯದಲ್ಲಿ ಪ್ರವರ್ಗ-1ರ ಅಡಿಯಲ್ಲಿ ಬರುವ ಯಾದವ ಗೊಲ್ಲ ಸಮುದಾಯದ ಏಕೈಕ ಮಹಿಳಾ ಶಾಸಕಿಯಾಗಿರುವ ಕೆ.ಪೂರ್ಣಿಮಾ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಕರ್ನಾಟಕ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಒಕ್ಕೂಟದ ಅಧ್ಯಕ್ಷ ಹಾಗೂ ಯಾದವ ಸಮಾಜದ ಮುಖಂಡ ರಾದ ಡಿ.ಟಿ.ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ 50 ವಿಧಾನಸಭಾಕ್ಷೇತ್ರಗಳಲ್ಲಿ ಗೆಲುವಿನ ನಿರ್ಣಾಯಕ ಪಾತ್ರ ವಹಿಸುವಲ್ಲಿ ಪ್ರವರ್ಗ-1ರ ಜಾತಿಗಳು ಸಮರ್ಥವಾಗಿವೆ.

ಈ ಜಾತಿ ಅಡಿಯಲ್ಲಿ ಬರುವ ಯಾದವ, ಗೊಲ್ಲ, ಉಪ್ಪಾರ, ಬೆಸ್ತ, ಕೋಳಿ, ದೊಂಬಿದಾಸ ಇತ್ಯಾದಿ ಸೇರಿ ಒಟ್ಟು 356 ಜಾತಿಗಳಿದ್ದು, ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ರಾಜ್ಯದ ಜನಸಂಖ್ಯೆಯ ಆರನೇ ಒಂದು ಭಾಗದಷ್ಟಿರುವ ಈ ಜನಸಂಖ್ಯೆಯ ಆಧಾರದ ಮೇಲೆ 15ರಿಂದ 20 ಕ್ಷೇತ್ರಗಳಲ್ಲಿ ಗೆಲ್ಲಬಹುದಾಗಿದೆ ಎಂದರು.

ಹಿಂದುಳಿದ ವರ್ಗಗಳ ಮಹಿಳಾ ಶಾಸಕಿಯಾದ ಪೂರ್ಣಿಮಾ ಅವರು ಈ ಸಂಘಟನೆಯ ನೇತೃತ್ವ ವಹಿಸಿಕೊಂಡು ಪ್ರವರ್ಗ-1 ಜಾತಿಯ ಗೊಲ್ಲ ಸಮಾಜದಿಂದ ಆಡಳಿತ ಪಕ್ಷ ಬಿಜೆಪಿಯಿಂದ ವಿಧಾನಸಭೆಗೆ ಗೆಲುವು ಸಾಧಿಸಿರುವ ಏಕೈಕ ಮಹಿಳಾ ಶಾಸಕಿಯಾಗಿದ್ದಾರೆ. ರಾಜಕೀಯ ಕುಟುಂಬದ ಹಿನ್ನೆಲೆಯಲ್ಲಿ ಬಂದಿರುವ ಇವರ ತಂದೆ ದಿ.ಎ.ಕೃಷ್ಣಪ್ಪನವರು ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.

ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಪೂರ್ಣಿಮಾ ಅವರು ಹಿಂದುಳಿದ ಜಾತಿಗಳ ಸಂಘಟನೆಯನ್ನು ಒಂದೇ ರಥದಲ್ಲಿ ತೆಗೆದುಕೊಂಡು ಹೋಗುವ ನೈಪುಣ್ಯತೆ ಹೊಂದಿದ್ದಾರೆ. ಇತ್ತೀಚಿನ ಕೇಂದ್ರ ಸಚಿವ ಸಂಪುಟದಲ್ಲಿ ಹಿಂದುಳಿದ ಜನಾಂಗದವರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿರುವುದು ತುಂಬಾ ಸಂತೋಷದ ವಿಷಯ. ಅದೇ ರೀತಿ ರಾಜ್ಯದಲ್ಲೂ ಕೂಡ ಹಿಂದುಳಿದ ಜಾತಿಗಳಿಗೆ ಸಂಪುಟದಲ್ಲಿ ಪ್ರಾತಿನಿದ್ಯ ನೀಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ. ಹಾಗಾಗಿ ಮಹಿಳಾ ಕೋಟಾದಡಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪ್ಪಾರ ಸಮಾಜದ ಕಾರ್ಯಾಧ್ಯಕ್ಷ ಎಚ್.ವಿ.ಬಂಡಿ, ಪ್ರಧಾನಕಾರ್ಯದರ್ಶಿ ಲೋಕೇಶಪ್ಪ, ಗೂರ್ಕ ಸಮಾಜದ ರಾಜ್ಯಾಧ್ಯಕ್ಷ ಜೋಗುಮಲ್, ತೇವರ್ ಸಮಾಜದ ರಾಜ್ಯಾಧ್ಯಕ್ಷ ನಾಗರಾಜ್, ದೋಂಬಿದಾಸರ ರಾಜ್ಯಾಧ್ಯಕ್ಷ ರಂಗಪ್ಪ, ಯಳವರ ಸಮಾಜದ ಅಧ್ಯಕ್ಷ ಎಂ.ಎಸ್.ಯಳವರ್ ಇದ್ದರು.

Facebook Comments