ಮೈಸೂರು ನಗರ ಪಾಲಿಕೆ ಚುನಾವಣೆ : ವಿಪಕ್ಷ ಸ್ಥಾನ ಕೂರಲು ಸಿದ್ಧ ಎಂದ ರಾಮದಾಸ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜ.16- ಈ ಬಾರಿಯ ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಆಪರೇಷನ್ ಕಮಲ ನಡೆಸುವುದಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ ಬಾರಿಯಂತೆ ಈ ಬಾರಿಯೂ ನಾವು ವಿರೋಧ ಪಕ್ಷದಲ್ಲೇ ಕುಳಿತು ಕಾರ್ಯ ನಿರ್ವಹಿಸುತ್ತೇವೆ. ಆಪರೇಷನ್ ಕಮಲ ಮಾಡಲ್ಲ ಎಂದು ಹೇಳಿದರು.

ಆಪರೇಷನ್ ಕಮಲ ಭೀತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಸದಸ್ಯರು ರೆಸಾರ್ಟ್‍ಗೆ ಹೋಗುತ್ತಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ ಅವರಲ್ಲೇ ಗೊಂದಲ ಇರಬಹುದು. ಆಪರೇಷನ್‍ಭೀತಿ ಇರಬಹುದು. ಅದಕ್ಕಾಗಿ ರೆಸಾರ್ಟ್‍ಗೆ ಹೋಗುತ್ತಿರಬಹುದು. ನಮಗೆ ಅದರ ಅಗತ್ಯವಿಲ್ಲ. ನಾವು ವಿರೋಧ ಪಕ್ಷದ ಸ್ಥಾನದಲ್ಲೇ ಕಾರ್ಯ ನಿರ್ವಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ನಾಳೆ (ಜ.17) ಬಿಜೆಪಿ ಕಾಪೆರ್ರೇಟರುಗಳ ಸಭೆ ಕರೆದು ಪಾಲಿಕೆ ಚುನಾವಣೆ ಸಂಬಂಧ ಚರ್ಚೆ ನಡೆಸುವುದಾಗಿ ಅವರು ತಿಳಿಸಿದರು.

ಸಚಿವ ಸ್ಥಾನ ನೀಡದಿದ್ದರೆ ಮುಂದೇನಾಗುತ್ತೆ ಕಾದು ನೋಡಿ ಎಂದು ಎಚ್.ವಿಶ್ವನಾಥ್ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮದಾಸ್ ವಿಶ್ವನಾಥ್ ಅವರು ನಮ್ಮ ತಂದೆ ಇದ್ದಂತೆ. ಬಿಜೆಪಿ ಹಾಲಿನಂತೆ. ಅದರಲ್ಲಿ ವಿಶ್ವನಾಥ್ ಸಕ್ಕರೆಯಂತೆ ಬೆರೆತು ಹಾಯಾಗಿ ಇರುತ್ತಾರೆಯೇ ಹೊರತು ಏನೂ ಆಗುವುದಿಲ್ಲ ಎಂದು ಉತ್ತರಿಸಿದರು.

ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ ಎಂದು ಮತ್ತೊಂದು ಪ್ರಶ್ನೆಗೆ ರಾಮದಾಸ್ ಉತ್ತರಿಸಿದರು. ರೇಸ್‍ಕೋರ್ಟ್ ಸ್ಥಳವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಬಳಸುವ ಉದ್ದೇಶವನ್ನು ಹೊಂದಿದ್ದು ,ಶೀಘ್ರದಲ್ಲೇ ಈ ಜಾಗ ಪರಿವರ್ತನೆ ಆಗಲಿದೆ. ಈ ತಿಂಗಳು ನಡೆಯಲಿರುವ ಬಜೆಟ್‍ನಲ್ಲಿ ಈ ಕುರಿತು ಪ್ರಸ್ತಾಪಿಸಿ ಸಾರ್ವಜನಿಕರ ಬಳಕೆಗೆ ಉಪಯೋಗವಾಗುವಂತೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಈ ತಿಂಗಳಾಂತ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ರಾಮದಾಸ್‍ತಿಳಿಸಿದರು.

Facebook Comments