ಜನಪ್ರತಿನಿಧಿಗಳ ಬೆನ್ನುಬಿದ್ದ ಕೊರೊನಾ, ಕಾಂಗ್ರೆಸ್ ಶಾಸಕ ರಂಗನಾಥ್‌ಗೆ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.6- ರಾಜ್ಯದಲ್ಲಿ ಮತ್ತೊಬ್ಬ ಶಾಸಕರಿಗೆ ಕೊರೊನಾ ಸೋಂಕು ತಗುಲಿದ್ದು, ಬಹಳಷ್ಟು ಜನಪ್ರತಿನಿಧಿಗಳು ಸೋಂಕಿನ ಭೀತಿ ಎದುರಿಸುತ್ತಿದ್ದಾರೆ. ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅವರಿಗೆ ಸೋಂಕು ತಗುಲಿದೆ.

ಜೊತೆಗೆ ಅವರ ಪುತ್ರನಿಗೂ ಸೋಂಕಿರುವ ಶಂಕೆ ವ್ಯಕ್ತವಾಗಿದ್ದು, ಕುಟುಂಬದ ಸದಸ್ಯರು ಮತ್ತು ಶಾಸಕರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು ಸೋಂಕಿತ ವ್ಯಕ್ತಿಯ ಸಂಪರ್ಕದಿಂದಾಗಿ ನನ್ನನ್ನು ಕ್ವಾರಂಟೈನ್‍ನಲ್ಲಿ ಇಟಲಾಗಿದೆ. ಮುಂದಿನ ಹದಿನೈದು ದಿನಗಳ ಕಾಲ ಯಾರು ನನ್ನನ್ನು ಸಂಪರ್ಕಿಸಬಾರದು ಎಂದು ರಂಗನಾಥ್ ಹೇಳಿದ್ದರು.

ಈ ನಡುವೆ ಪ್ರಯೋಗಾಲಯದ ವರದಿ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಹೇಳಲಾಗಿದೆ. ಕುಣಿಗಲ್ ವರದಿ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯೊಬ್ಬರಿಗೆ ಸೋಂಕು ತಗುಲಿತ್ತು, ಮಾನವೀಯತೆ ದೃಷ್ಟಿಯಿಂದ ಶಾಸಕರು ಆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಲು ನೇರವಾದರು.

ಲಾಕ್‍ಡೌನ್ ದಿನಗಳಲ್ಲೂ ಶಾಸಕರು ಕ್ಷೇತ್ರದ ಜನರ ನಡುವೆಯೇ ಓಡಾಡಿಕೊಂಡಿದ್ದರು. ಕೊರೊನಾ ಕುರಿತು ತಿಳುವಳಿಕೆ ನೀಡಿ ಜಾಗೃತಿ ಮೂಢಿಸುತ್ತಿದ್ದರು. ಮೊನ್ನೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸುತ್ತಿದ್ದರು.

ಸಭೆಯ ನಡುವೆಯೇ ಶಾಸಕರಿಗೆ ಮೈ ಕೈ ನೋವು ಕಾಣಿಸಿಕೊಂಡಿದೆ. ತಕ್ಷಣವೆ ಸಭೆಯನ್ನು ಅರ್ಧಕ್ಕೆ ಬಿಟ್ಟು ಹೊರ ಹೋಗಿದ್ದರು. ಬೆಂಗಳೂರಿಗೆ ಬಂದು ಸ್ವಾಬ್ ಟೆಸ್ಟ್ ಮಾಡಿಕೊಂಡಿದ್ದರು. ಪ್ರಯೋಗಾಲಯದ ವರದಿಯ ಪ್ರಕಾರ ಶಾಸಕರಿಗೆ ಸೋಂಕಿರುವುದು ಖಚಿತವಾಗಿದೆ. ನೆರೆ ರಾಜ್ಯಗಳಿಂದ ಜನ ವಲಸೆ ಬಂದ ಮೇಲೆ ಕುಣಿಗಲ್‍ನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕಾನ್ಸ್‍ಟೆಬಲ್ ಒಬ್ಬರಿಗೆ ಸೋಂಕು ತಗುಲಿದ್ದರಿಂದ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಈಗ ಶಾಸಕರು ಸೋಂಕಿಗೆ ಸಿಲುಕಿರುವುದಿಂದ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಲ್ಲೂ ಆತಂಕ ಸೃಷ್ಟಿಯಾಗಿದೆ.

ಜನರ ನಡುವೆ ಇರದಿದ್ದರೆ ಜನಪ್ರಿಯತೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೋ, ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂಬ ಉಮೇದಿನಿಂದಲೂ ಜನಪ್ರತಿನಿಧಿಗಳು, ಜನರು ಜನರ ನಡುವೆ ಓಡಾಡುತ್ತಲೆ ಇದ್ದಾರೆ. ಇದರಿಂದಾಗಿ ಹಲವಾರು ಮಂದಿ ಜನಪ್ರತಿನಿಧಿಗಳು ಸೋಂಕಿಗೆ ಸಿಲುಕಿದ್ದು, ಇನ್ನೂ ಕೆಲವರು ಸೋಂಕಿರ ಸಂಪರ್ಕದಿಂದ ಕ್ವಾರಂಟೈನ್‍ನಲ್ಲಿದ್ದಾರೆ.

ಈ ಮೊದಲು ಮಂಗಳೂರು ನಗರ ಉತ್ತರ ಕ್ಷೇತ್ರದ ಭರತ್ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯಗೆ ಸೋಂಕು ತಗುಲಿತ್ತು. ಅವರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಉಳಿದಂತೆ ಸೋಂಕು ತಗುಲಿದ ತಹಸೀಲ್ದಾರ ಅವರ ಜೊತೆ ಕಂಟೈನಮೆಂಟ್ ಝೋನ್‍ಗೆ ಭೇಟಿ ನೀಡಿದ ಕೆ.ಆರ್.ನಗರ ಕ್ಷೇತ್ರದ ಶಾಸಕರ ಸಾ.ರಾ.ಮಹೇಶ್, ಸೋಂಕಿತ ಗನ್‍ಮನ್ ಸಂಪರ್ಕದಿಂದ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡುರಾವ್, ಸೋಂಕಿತರ ಸಂಪರ್ಕದಿಂದ ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ್, ಪಕ್ಕದ ಮನೆಯ ವ್ಯಕ್ತಿಗೆ ಸೋಂಕು ತಗುಲಿದ್ದರಿಂದ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಮುನ್ನೇಚ್ಚರಿಕೆಯ ಕ್ರಮವಾಗಿ ಕ್ವಾರಂಟೈನಲ್ಲಿದ್ದಾರೆ.

ಖುದ್ದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರೇ ಸೋಂಕನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ಮನೆಯಲ್ಲಿ ಅಡುಗೆ ಕೆಲಸ ಮಾಡುವವರಿಂದ ಸುಧಾಕರ್ ಅವರ ಪತ್ನಿ, ಮಗಳು ಮತ್ತು ತಂದೆಗೆ ಸೋಂಕು ತಗುಲಿತ್ತು. ಹೀಗೇ ರಾಜ್ಯದಲ್ಲಿ ಹಲವಾರು ಮಂದಿ ಜನಪ್ರತಿನಿಧಿಗಳು ಸೋಂಕಿನ ಭಯದಲ್ಲಿ ಕೆಲಸ ಮಾಡುವಂತಾಗಿದೆ.

Facebook Comments