ಬ್ರೇಕಿಂಗ್ : ಸ್ವತಃ ಡ್ಯಾಮ್ನ ಗೇಟ್ ತೆಗೆದು ಕರ್ನಾಟಕಕ್ಕೆ ಕೃಷ್ಣ ನೀರುಬಿಟ್ಟ ‘ಮಹಾ’ ಶಾಸಕ..! (Video)
ಬೆಳಗಾವಿ, ಮೇ 12-ನೀರಿಗಾಗಿ ಹಾತೊರೆಯುತ್ತಿರುವ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶದ ರೈತರಿಗೆ ಕೊನೆಗೂ ಕೃಷ್ಣಾ ನದಿಯಲ್ಲಿ ನೀರು ಹರಿದಿದೆ.
ಕಳೆದೊಂದು ವಾರದಿಂದ ಕರ್ನಾಟಕ-ಮಹಾರಾಷ್ಟ್ರ ಸರ್ಕಾರದ ನಡುವೆ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆಗೆ ಪತ್ರ ವ್ಯವಹಾರಗಳು, ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುವ ನಡುವೆಯೇ ಹೃದಯವಂತಿಕೆ ಮೆರೆದಿರುವ ಮಹಾರಾಷ್ಟ್ರದ ಶಿರೋಳ ಶಾಸಕ ಉಲ್ಹಾಸರಾವ ಪಾಟೀಲರು ಸ್ವತಃ ರಾಜಾಪುರ ಜಲಾಶಯಕ್ಕೆ ಹೋಗಿ ತಾವೇ ಕ್ರಸ್ಟ್ ಗೇಟ್ ತೆರೆದಿದ್ದಾರೆ.
ಕೃಷ್ಣಾ ನದಿಗೆ ಈ ನೀರು ಹರಿದಿದ್ದರಿಂದ ಅಥಣಿ ತಾಲೂಕಿನ ಶಿರಗುಪ್ಪಿ,ಜುಗುಳ, ಕಲ್ಲೋಳ, ಯಡೂರು ಮುಂತಾದ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಶಾಸಕರೊಂದಿಗೆ ಕೃಷ್ಣಾ ತೀರದ ಜನರೂ ರಾಜಾಪುರ ಜಲಾಶಯಕ್ಕೆ ಹೋಗಿದ್ದರು.
ಕರ್ನಾಟಕದ ಶಾಸಕರು ಕೈಕಟ್ಟಿ ಕುಳಿತಿರುವಾಗ ಮಹಾರಾಷ್ಟ್ರ ಶಾಸಕರೊಬ್ಬರು ಸ್ವತಃ ಗೇಟ್ ತೆರೆದು ನೀರು ಹರಿಸಿದ್ದಕ್ಕೆ ಕನ್ನಡಿಗರು ಶಾಸಕರನ್ನು ಬಾಯ್ತುಂಬ ಹೊಗಳಿದ್ದಾರೆ. ರಾಜಾಪುರ ಜಲಾಶಯದಲ್ಲಿ ಐದು ಅಡಿ ನೀರು ಸಂಗ್ರಹವಿದ್ದು ಸುಮಾರು 0.75 ಟಿಎಮ್ ಸಿ ನೀರಿನ ಸಂಗ್ರಹವಿದೆಯೆನ್ನಲಾಗಿದೆ.
ಕೊಯ್ನಾದಿಂದ 4 ಟಿಎಮ್ ಸಿ ನೀರು ಬಿಡುಗಡೆಗೆ ಕೋರಿ ಕರ್ನಾಟಕ ಸರಕಾರವು ಕಳೆದ ಶುಕ್ರವಾರ ಮಹಾರಾಷ್ಟ್ರಕ್ಕೆ ಎರಡನೇ ಪತ್ರ ಬರೆದಿದೆ. ಆದರೆ ಯಾವುದೇ ಆದೇಶ ಬಂದಿಲ್ಲವೆಂದು ಸಾಂಗ್ಲಿ ನೀರಾವರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನು ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಚುನಾವಣೆಗಿಂತ ಮುಂಚೆ ನೀರು ಬಿಡುಗಡೆ ಮಾಡಿಸಿಕೊಂಡು ಬರುತ್ತೇವೆ ಎಂಬ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸುಮಾರು 500 ಕ್ಯೂಸೆಕ್ ನೀರು ಹರಿದಿದೆ. ಮಹಾರಾಷ್ಟ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ನಡುವೆ ಒಮ್ಮತ ಮೂಡಿದ್ದು, ನೀರು ಹರಿಸುವುದು ಬಹುತೇಕ ಖಚಿತವಾಗಿತ್ತು. ಇದಕ್ಕೂ ಮುನ್ನವೇ ಶಾಸಕರು ತಾವೇ ಜಲಾಶಯದ ಗೇಟ್ ತೆರೆದು ಸುದ್ದಿಯಾಗಿದ್ದಾರೆ.