ಯಾವುದೇ ಜವಾಬ್ದಾರಿ ನಿರ್ವಹಿಸಲು ಸಿದ್ಧ: ರೇಣುಕಾಚಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.1- ಪಕ್ಷ ವಹಿಸುವ ಯಾವುದೇ ಜವಾಬ್ದಾರಿ ನಿರ್ವಹಿಸಲು ಸಿದ್ದ. ಒಂದು ವೇಳೆ ಕಸ ಹೊಡೆಯಬೇಕೆಂದು ಸೂಚಿಸಿದರೆ ಅದನ್ನೂ ನಿರ್ವಹಿಸುವುದಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾ ಚಾರ್ಯ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿಂದು ತಮ್ಮ ಕಚೇರಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಸಾಮಾನ್ಯ ಕಾರ್ಯಕರ್ತನಾಗಿ ನಿರ್ವಹಿಸುತ್ತೇನೆ. ಇಂದು ಸಿಎಂ ಕಚೇರಿಗೆ ಬಂದು ಒಳ್ಳೆಯ ದಿನ ಬರುತ್ತದೆ ಎಂದು ಹಾರೈಸಿದ್ದಾರೆ.ಆ ಶುಭ ದಿನಕ್ಕಾಗಿ ಕಾಯುತ್ತಿರುತ್ತೇನೆ ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ರಾಜಕೀಯ ಕಾರ್ಯದರ್ಶಿಯಾಗಿದ್ದೆ. ಈಗಲೂ ರಾಜಕೀಯ ಕಾರ್ಯದರ್ಶಿಯಾಗಿದ್ದೇನೆ. ಅದೇ ಕಚೇರಿ, ಅದೇ ಜವಾಬ್ದಾರಿಯನ್ನು ವರಿಷ್ಠರು ಮತ್ತು ಮುಖ್ಯಮಂತ್ರಿಗಳು ನೀಡಿದ್ದಾರೆ. ಆಗ ಮುಖ್ಯಮಂತ್ರಿ ಹಾಗೂ ಶಾಸಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಿದ್ದೆ.

ಈಗಲೂ ಜನರ ಮತ್ತು ಸರ್ಕಾರದ ನಡುವೆ ಅದೇ ರೀತಿ ಕೆಲಸ ಮಾಡುತ್ತೇನೆ. ಸದ್ಯಕ್ಕೆ ಸಂತೃಪ್ತಿ, ಅತೃಪ್ತಿ ಯಾವುದನ್ನೂ ಹೇಳುವುದಿಲ್ಲ. ನಮ್ಮ ಮುಂದೆ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರದ ಎರಡು ಉಪಚುನಾವಣೆಯಿದೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯೂ ಎದುರಾಗುತ್ತದೆ. ಈ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಗೆಲುವು ಸಾಸುವುದು ನಮ್ಮ ಉದ್ದೇಶ ಎಂದರು.

ನಮ್ಮ ರಾಷ್ಟ್ರೀಯ ನಾಯಕರು ಸಿಎಂ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕೆಂದು ಹೇಳಿದ್ದಾರೆ. ಅದರಂತೆ ಅವರ ನೇತೃತ್ವದಲ್ಲಿ ಚುನಾವಣೆ ನಡೆಸುತ್ತೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ನಾಯಕರು ಹಾಗೂ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರೆಲ್ಲರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸುವುದಾಗಿ ಸಿಎಂ ಹೇಳಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ಬೇರೇನನ್ನೂ ಹೇಳುವುದಿಲ್ಲ ಎಂದರು.

Facebook Comments