ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ : ಶಾಸಕ ರೇಣುಕಾಚಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.27- ನನಗೆ ಸಚಿವ ಸ್ಥಾನ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಆದರೆ, ಅದಕ್ಕಾಗಿ ನಾನು ಯಾರ ಬಳಿಯೂ ಲಾಬಿ ಮಾಡುವುದಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ. ಹಿಂದೆ ಒಂದು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ.

ಪಕ್ಷದ ವರಿಷ್ಠರು ನನಗೆ ಜವಾಬ್ದಾರಿ ನೀಡಿದರೆ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಆದರೆ, ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವಂತಹ ವ್ಯಕ್ತಿ ನಾನಲ್ಲ ಎಂದು ಸ್ಪಷ್ಟಪಡಿಸಿದರು. ನನ್ನ ಪರವಾಗಿ ಯಾರೊಬ್ಬರೂ ಸಚಿವ ಸ್ಥಾನಕ್ಕೆ ಬೇಡಿಕೆ ಇಡಬಾರದೆಂದು ಕಾರ್ಯಕರ್ತರು ಹಾಗೂ ಹಿತೈಷಿಗಳಲ್ಲಿ ಮನವಿ ಮಾಡುತ್ತೇನೆ.

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನ ಮೇಲೆ ವಿಶ್ವಾಸವಿಟ್ಟು ಕೊಟ್ಟರೆ ಅದನ್ನು ನಿಭಾಯಿಸಲು ಸಿದ್ಧ. ಅನಗತ್ಯವಾಗಿ ಪಕ್ಷಕ್ಕೆ ಮುಜುಗರ ಸೃಷ್ಟಿಸುವಂತಹ ಕೆಲಸವನ್ನು ಮಾಡಬೇಡಿ ಎಂದು ಮನವಿ ಮಾಡಿದರು.

ಸರ್ಕಾರ ಹಾಗೂ ಪಕ್ಷಕ್ಕೆ ಅನುಕೂಲವಾಗುವಂತಹ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಬೇಕಾದರೆ ವರಿಷ್ಠರು ಕೆಲವು ಹೊಸ ಪ್ರಯೋಗಗಳನ್ನು ಮಾಡಬಹುದು. ಏನೇ ತೀರ್ಮಾನ ತೆಗೆದುಕೊಂಡರು ನಾವೆಲ್ಲರು ಸರ್ವಸಮ್ಮತದಿಂದ ಒಪ್ಪಿಕೊಳ್ಳುತ್ತೇವೆ ಎಂದರು.

ಕೇಂದ್ರ ವರಿಷ್ಠರು ಯಾರನ್ನೇ ಸಿಎಂ ಅಭ್ಯರ್ಥಿ ಮಾಡಿದರೂ ಅವರಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ವರಿಷ್ಠರ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಹೇಳಿದರು. ಈ ಕ್ಷಣದವರೆಗೂ ವರಿಷ್ಠರು ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಆದಷ್ಟು ಬೇಗ ಈ ಪ್ರಕ್ರಿಯೆ ಮುಗಿಯಲಿದೆ. ನಮ್ಮ ಹೈಕಮಾಂಡ್ ಬಲಿಷ್ಠವಾಗಿದ್ದು, ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

Facebook Comments