IMA ವಂಚನೆ ಪ್ರಕರಣದಲ್ಲಿ ಶಾಸಕ ರೋಷನ್ ಬೇಗ್ ಎಸ್ಐಟಿ ವಶಕ್ಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಜು.16 : ಅಧಿಕ ಬಡ್ಡಿ ಆಸೆ ತೋರಿಸಿ ಸಾವಿರಾರು ಜನರಿಗೆ ನೂರಾರು ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಶಿವಾಜಿನಗರ ನಗರದ ಶಾಸಕ ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ರೋಷನ್ ಬೇಗ್ ಅವರನ್ನು ವಿಶೇಷ ತನಿಖಾ ತಂಡ ( ಎಸ್ ಐಟಿ) ವಶಕ್ಕೆ ಪಡೆದುಕೊಂಡಿದೆ.

ವಿಶೇಷ ಎಂದರೆ ಈ ಪ್ರಕರಣದ ರೂವಾರಿ ಮೊಹಮ್ಮದ್ ಮನ್ಸೂರ್ ಖಾನ್ ಮಧ್ಯಾಹ್ನ ಅಡಿಯೋ ಬಿಡುಗಡೆ ಮಾಡಿ, ಇನ್ನು 24 ಗಂಟೆಯಲ್ಲಿ ಬೆಂಗಳೂರಿಗೆ ಬರುವುದಾಗಿ ಹೇಳಿದ್ದ. ಐಎಂಎ ಹಗರಣದಲ್ಲಿ ರೋಷನ್ ಬೇಗ್ ಭಾಗಿಯಾಗಿದ್ದು ಅವರಿಗೂ ಹಣ ಸಂದಾಯವಾಗಿದೆ ಎಂದು ಐಎಂಎ ಮುಖ್ಯಸ್ಥ ಮನ್ಸೂರ್ ಅಲಿ ಖಾನ್ ಆರೋಪ ಮಾಡಿದ್ದ.

ಮುಂಬೈಗೆ ಹೊರಟಿದ್ದ ರೋಷನ್ ಬೇಗ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್ ಐಟಿ ತನಿಈ ಖಾಧಿಕಾರಿ ಗಿರೀಶ್ ನೇತೃತ್ವದ ತಂಡ ವಶಕ್ಕೆ ಪಡೆದಿದೆ. ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೀಡಿದ್ದ ಮೊದಲು ಮತ್ತು ಎರಡನೇ ನೋಟಿಸ್​ಗೆ ಶಾಸಕ ರೋಷನ್ ಬೇಗ್ ಸ್ಪಂದಿಸಿರಲಿಲ್ಲ.

ತನ್ನ ಹುಟ್ಟುಹಬ್ಬ, ಹಜ್ ಯಾತ್ರೆ ಹಾಗೂ ವಿಧಾನಸಭೆ ಬೆಳವಣಿಗೆ ಕಾರಣ ನೀಡಿ ಕಾಲಾವಕಾಶ ಕೇಳಿದ್ದರು. ಆಪ್ತ ಸಲಹೆಗಾರನನ್ನು ಎಸ್ಐಟಿ ಕಚೇರಿಗೆ ಕಳುಹಿಸಿ ಸಮಯ ಕೇಳಿದ್ದರು. ಜುಲೈ 25 ರಂದು ವಿಚಾರಣೆಗೆ ಹಾಜರಾಗುತ್ತಾರೆ ಎಂದು ಹೇಳಲಾಗಿತ್ತು.

ಬೇಗ್ ಬೆಂಗಳೂರು ಬಿಟ್ಟು ಹೊರಹೋಗಬಹುದೆಂಬ ಸುಳಿವು ಅರಿತ ತನಿಖಾ ತಂಡ ಅವರ ಚಲನ ವಲನಗಳ ಮೇಲೆ ಕಣ್ಣಿಟ್ಟಿದ್ದರು. ಮುಂಬೈ ಗೆ ತೆರಳಲು ಸಜ್ಜಾಗಿದ್ದ ಅವರನ್ನು ವಶಕ್ಕೆ ಪಡೆಯಲಾಯಿತು. ಐಎಂಎ ಬಹುಕೋಟಿ ಹಗರಣದಲ್ಲಿ ತಲೆಮರೆಸಿಕೊಂಡಿದ್ದ ಮೊಹಮದ್ ಮನ್ಸೂರ್​ ಖಾನ್​ ಆಡಿಯೋ ಟೇಪ್ ಒಂದನ್ನು ಪೊಲೀಸ್ ಕಮಿಷನರ್​ಗೆ ಕಳುಹಿಸಿದ್ದ.

ಅದರಲ್ಲಿ ಕಾಂಗ್ರೆಸ್​ ಶಾಸಕ ರೋಷನ್​ ಬೇಗ್ ವಿರುದ್ಧವೂ ಆರೋಪ ಮಾಡಿದ್ದ. ತನ್ನ ಹೂಡಿಕೆದಾರರಿಗೆ ಬಹುಕೋಟಿ ರೂ. ವಂಚನೆ ಮಾಡಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮನ್ಸೂರ್​​ ಖಾನ್ ​​​​​​​​ ಸೋಮವಾರ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ, ನನಗೆ ಭಾರತದ ಸಂವಿಧಾನದ ಮೇಲೆ ನಂಬಿಕೆ ಇದೆ.

ನನ್ನನ್ನು ನಂಬಿರುವ ಜನರಿಗೆ ನಾನು ಮೋಸ ಮಾಡುವುದಿಲ್ಲ. ನನ್ನ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ಹಣವಾಗಿ ಪರಿವರ್ತಿಸಿ ಎಲ್ಲರ ಹಣವನ್ನು ವಾಪಸು ನೀಡುವ ಸಲುವಾಗಿ 24 ಗಂಟೆಗಳ ಒಳಗೆ ಭಾರತಕ್ಕೆ ಬರುತ್ತೇನೆ. ನನಗೆ ರಕ್ಷಣೆ ಒದಗಿಸಿದರೆ ನಾನು ಭಾರತಕ್ಕೆ ಮರಳುತ್ತೇನೆ ಎಂದು ಹೇಳಿದ್ದರು.

ಕಾಂಗ್ರೆಸ್‌ ಪಕ್ಷದ ಶಾಸಕ ರೊಷನ್ ಬೇಗ್ ಅವರಿಗೆ ಐಎಂಎ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ನೋಟಿಸ್‌ ಜಾರಿ ಮಾಡಿತ್ತು. ರೋಷನ್‌ ಬೇಗ್‌ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲೇ ಎಸ್‌ಐಟಿ ನೋಟಿಸ್‌ ಜಾರಿ ಮಾಡಿತ್ತು.

ಐಎಂಎ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ರೋಷನ್ ಬೇಗ್ ಅವರಿಗೆ ಗುರುವಾರ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸುತ್ತು. ಕಾಂಗ್ರೆಸ್‌ ಹಿರಿಯ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ವೇಣು ಗೋಪಾಲ್‌ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ಇದರಿಂದ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಐಎಂಎ ಪ್ರಕರಣದಲ್ಲಿ ಬೆಂಗಳೂರು ನಗರದ ಕಂದಾಯ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳನ್ನು ವಿಶೇಷ ತನಿಖಾ ತಂಡ ಬಂಧಿಸಿತ್ತು.  ಜುಲೈ 5ರಂದು ತನಿಖಾ ತಂಡ ಬೆಂಗಳೂರು ನಗರ ಉಪವಿಭಾಗಾಧಿಕಾರಿ (ಉತ್ತರ) ಎಲ್ ಸಿ ನಾಗರಾಜ್ ಹಾಗೂ ಗ್ರಾಮ ಲೆಕ್ಕಿಗ ಮಂಜುನಾಥ್ ಅವರನ್ನು ವಶಕ್ಕೆ ಪಡೆದರು.

ನಂತರ ಜುಲೈ 8ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ ಎಂ ವಿಜಯಶಂಕರ್ ಅವರನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಬೆಂಗಳೂರು ಜಿಲ್ಲಾಧಿಕಾರಿ ಡಿಸಿ ವಿಜಯ್ ಶಂಕರ್ ಮನ್ಸೂರ್ ಖಾನ್ ನಿಂದ 1 ಕೋಟಿ ಲಂಚ ಪಡೆದಿದ್ದರು ಎನ್ನಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಐಎಂಎ ಸಂಸ್ಥೆಯ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್‌ ಶಂಕರ್ ಅವರಿಂದ ವಿಶೇಷ ತನಿಖಾ ದಳ(ಎಸ್‌ಎಟಿ) 2.5 ಕೋಟಿ ರೂ. ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ.

ರಿಚ್ ಮಂಡ್‌ ರಸ್ತೆಯಲ್ಲಿರುವ ಐಎಂಎ ಸಂಸ್ಥೆಯ ಒಡೆತನದ ಅಪಾರ್ಟ್‌ಮೆಂಟ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಎಸ್‌ಐಟಿ ನಕಲಿ ದಾಖಲೆ ಸೃಷ್ಟಿ ಆರೋಪದಡಿ ಮುನೀರ್‌ ಮತ್ತು ಬ್ರಿಗೆಡ್‌ ಬಾಬು ಎಂಬುವರನ್ನು ಬಂಧಿಸಿದೆ. ಈ ಪೈಕಿ ಮುನೀರ್‌ ರೌಡಿ ಶೀಟರ್‌ ಆಗಿದ್ದ ಎಂದು ಎಸ್‌ಐಟಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

ಇನ್ನುಬಂಧಿತ ಜಿಲ್ಲಾಧಿಕಾರಿ ವಿಜಯ್ ಶಂಕರ್‌ ಲಂಚವಾಗಿ ಪಡೆದಿದ್ದ 1.5 ಕೋಟಿ ರೂ.ವನ್ನು ನಗರದ ಬಿಲ್ಡರ್‌ ಒಬ್ಬರಿಗೆ ನಿವೇಶನ ಮತ್ತು ಫ್ಲಾಟ್‌ ಖರೀದಿಗೆಂದು ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದು, ಈ ಮೊತ್ತವನ್ನು ಬಿಲ್ಡರ್‌ನಿಂದ ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಎಸ್‌ಐಟಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮತ್ತೊಂದು ವ್ಯವಹಾರದಲ್ಲಿ ಇವರು 1 ಕೋಟಿ ರೂ. ಲಂಚ ಪಡೆದಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಆ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಮೊಹಮ್ಮದ್ ಮನ್ಸೂರ್ ಖಾನ್ ದುಬೈ ನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆತನ ಬಂಧನಕ್ಕೆ ಈಗಾಗಲೇ ಬಲೆ ಬೀಸಲಾಗಿದೆ.

Facebook Comments

Sri Raghav

Admin