ಕಾಂಗ್ರೆಸ್ಗೆ ಬಾಹ್ಯ ಬೆಂಬಲ ನೀಡಿದ ಶಾಸಕ ಶರತ್ ಬಚ್ಚೇಗೌಡ
ಬೆಂಗಳೂರು, ಫೆ.25- ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಶಾಸಕ ಶರತ್ ಬಚ್ಚೇಗೌಡ ಇಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ಗೆ ಬಾಹ್ಯ ಬೆಂಬಲ ನೀಡುವ ಅಧಿಕೃತ ಪತ್ರವನ್ನು ನೀಡಿದ್ದಾರೆ. ಸಿದ್ದರಾಮಯ್ಯ ಅವರ ಅಕೃತ ನಿವಾಸದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶರತ್ ಬಚ್ಚೇಗೌಡ ನೀಡಿದ ಬಾಹ್ಯ ಬೆಂಬಲವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒಪ್ಪಿಕೊಂಡಿದ್ದು, ಇನ್ನೂ ಮುಂದೆ ಶರತ್ ಬಚ್ಚೇಗೌಡರ ಬೆಂಬಲಕ್ಕೆ ಕಾಂಗ್ರೆಸ್ ನಿಲ್ಲಲಿದೆ ಎಂದು ಘೋಷಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ನಮ್ಮ ಸಂವಿಧಾನದಲ್ಲಿ ಪಕ್ಷೇತರರಾಗಿ ಸರ್ಧೆ ಮಾಡಲು ಅವಕಾಶ ಇದೆ. ಆಯ್ಕೆಯಾದ ಮೇಲೆ ಅವ ಮುಗಿಯುವವರೆಗೂ ಯಾವ ಪಕ್ಷಕ್ಕೂ ಸೇರ್ಪಡೆಯಾಗುವಂತ್ತಿಲ್ಲ. ಸೇರ್ಪಡೆಯಾದರೆ ಪಕ್ಷಾಂತರ ಕಾಯ್ದೆ ಅಡ್ಡಿ ಬರುತ್ತದೆ. ಆದರೆ ಯಾವುದೇ ಪಕ್ಷಕ್ಕಾದರೂ ಬಾಹ್ಯ ಬೆಂಬಲ ನೀಡಬಹುದು. ಹಿಂದೆ ಒಬ್ಬ ಪಕ್ಷೇತರರು ನಮ್ಮ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದರು. ಆದರೆ ಪಕ್ಷಕ್ಕೆ ಸೇರ್ಪಡೆಯಾಗಿರಲಿಲ್ಲ ಎಂದು ಹೇಳಿದರು.
ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್ಗೆ ಶರತ್ ಬಚ್ಚೇಗೌಡ ಈ ಮೊದಲು ಸದನದ ಒಳಗೆ ಹೊರಗೆ ಬೆಂಬಲ ಕೊಟ್ಟಿದ್ದರು. ಇಂದು ಅಕೃತವಾಗಿ ಪತ್ರ ಕೊಟ್ಟಿದ್ದಾರೆ. ಇನ್ನೂ ಮುಂದೆ ಅವರ ನಮ್ಮ ಕಾಂಗ್ರೆಸ್ ಶಾಸಕಾಂಗ ಪಕ್ಷದ ಭಾಗವಾಗಲಿದ್ದಾರೆ. ನಾನು ಅವರ ಬೆಂಬಲವನ್ನು ಒಪ್ಪಿಕೊಂಡಿದ್ದೇನೆ ಎಂದರು.
ಪಕ್ಷೇತರರಾಗಿ ಒಬ್ಬಂಟಿಯಾಗಿ ಹೋರಾಟ ಮಾಡುವ ಬದಲಿಗೆ ನಮ್ಮ ಪಕ್ಷದ ಬೆಂಬಲ ಇದ್ದರೆ ಅವರಿಗೆ ಇನ್ನೂ ಹೆಚ್ಚು ಶಕ್ತಿ ಬರಲಿದೆ. ಹಾಗಾಗಿ ಇನ್ನೂ ಮುಂದೆ ಶರತ್ ಬಚ್ಚೇಗೌಡರಿಗೆ ಕಾಂಗ್ರೆಸ್ ಎಲ್ಲಾ ರೀತಿಯ ರಾಜಕೀಯ ಬೆಂಬಲ ಕೊಡಲಿದೆ ಎಂದರು.
ಕಳೆದ ಡಿಸೆಂಬರ್ನಲ್ಲಿ ಉಪ ಚುನಾವಣೆ ನಡೆದಾಗ ನಾನು ಪ್ರಚಾರಕ್ಕೆ ಹೋಗಿದ್ದೆ. ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ಪದ್ಮಾವತಿ ಸುರೇಶ್ ಅವರಿಗೆ ಮತ ಕೊಡಿ, ಶರತ್ ಬಚ್ಚೇಗೌಡರಿಗೆ ಕೊಡಬೇಡಿ ಎಂದು ಪ್ರಚಾರ ಮಾಡಿದ್ದೆ. ಆದರೆ ಜನ ಶರತ್ ಬಚ್ಚೇಗೌಡರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ, ಒಂದು ರೂಪಾಯಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಕೊರೊನಾದಿಂದಾಗಿ ದುಡ್ಡಿಲ್ಲ ಎನ್ನುತ್ತಾರೆ. ಕೊರೊನಾ ಹೆಸರು ಹೇಳಿ 36 ಸಾವಿರ ಕೋಟಿ ರೂ.ಸಾಲ ಮಾಡಿದ್ದಾರೆ. ಅದರಲ್ಲಿ ಶೇ.50ರಷ್ಟು ಅಥವಾ ಅದಕ್ಕಿಂತ ಹೆಚ್ಚು ನುಂಗಿದ್ದಾರೆ. ಸರ್ಕಾರ ಕೊರೊನಾಗೆ ಖರ್ಚು ಮಾಡಿರುವುದು ಕೇವಲ ಐದಾರು ಸಾವಿರ ಕೋಟಿ ಮಾತ್ರ. ಉಳಿದ ದುಡ್ಡೇಲ್ಲಾ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದರು.
ಸರ್ಕಾರ ನಡೆಸುವವರಿಗೆ ಮಾನ ಮರ್ಯಾದೆ ಇಲ್ಲ. ಯಡಿಯೂರಪ್ಪ ನಿಂತು ಹೋಗಿರುವ ಡಕೋಟಾ ಬಸ್ ಮೇಲೆ ಕುಳಿತಿದ್ದಾರೆ. ಈ ಸರ್ಕಾರವನ್ನು ತೆಗೆಯಲೇಬೇಕು. ಆ ಹೋರಾಟಕ್ಕೆ ಶರತ್ತು ಬಚ್ಚೇಗೌಡ ನಮ್ಮ ಜೊತೆಗೂಡಿದ್ದಾರೆ. ಇತ್ತೀಚೆಗೆ ಹೊಸಕೋಟೆಯಲ್ಲಿ ಶಿಷ್ಠಾಚಾರದ ಉಲ್ಲಂಘನೆಯಾಗಿದೆ. ಜನ ಮತ ಹಾಕಿರುವುದು ಶರತ್ ಬಚ್ಚೇಗೌಡರಿಗೆ ಎಂ.ಟಿ.ಬಿ.ನಾಗರಾಜ್ರಿಗೆ ಅಲ್ಲ. ಹಿಂಬಾಗಿಲ ಮೂಲಕ ಆತ ಸಚಿವನಾಗಿದ್ದಾನೆ.
ನಿಯಮ ಪ್ರಕಾರ ಶರತ್ ಬಚ್ಚೇಗೌಡರಿಗೆ ಶಿಷ್ಠಚಾರ ಅನ್ವಯವಾಗುತ್ತದೆ. ದೇಶದ ಪ್ರಧಾನಿ ಅಥವಾ ರಾಷ್ಟ್ರಪತಿ ಬಂದರೂ ಆ ಕಾರ್ಯಕ್ರಮ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲೇ ನಡೆಯಬೇಕು. ಅಧ್ಯಕ್ಷರ ಸಮಯಕ್ಕೆ ಹೊಂದಾಣಿಕೆ ಮಾಡಿಕೊಂಡೇ ಕಾರ್ಯಕ್ರಮ ನಿಗದಿ ಮಾಡಬೇಕು. ಆದರೆ ಹೊಸಕೋಟೆಯಲ್ಲಿ ಬೇರೆ ರೀತಿ ನಡೆದಿದೆ ಎಂದರು. ಶರತ್ ಬಚ್ಚೇಗೌಡ ಬಿಜೆಪಿ ವಿರೋಯಾಗಿದ್ದಾರೆ. ಅವರು ಇಂದಿನಿಂದ ನಮ್ಮ ಜೊತೆ ಕೈಜೊಡಿಸುತ್ತಾರೆ. ಇನ್ನೂ ಮುಂದೆ ಅವರ ಕ್ಷೇತ್ರದಲ್ಲಿ ಅಕ್ರಮಗಳಾದರೆ, ದೌರ್ಜನ್ಯಗಳು ನಡೆದರೆ ನಾವು ಶರತ್ ಬಚ್ಚೇಗೌಡರ ಜೊತೆ ನಿಲ್ಲುತ್ತೇವೆ ಎಂದರು.
ಬಚ್ಚೇಗೌಡ ಮತ್ತು ನಾನು ಆತ್ಮೀಯರು. ಪರಸ್ಪರ ನಾವು ಏಕವಚನದಲ್ಲೇ ಮಾತನಾಡುತ್ತಿದ್ದೇವು. ಎಲ್ಲಿ ಆತ್ಮೀಯತೆ ಇದೆಯೋ ಅಲ್ಲಿ ಏಕವಚನದಲ್ಲಿ ಮಾತುಕತೆ ನಡೆಯುತ್ತದೆ ಎಂದರು. ಈ ಕಾರ್ಯಕ್ರಮವನ್ನು ವಿಧಾನಸೌಧದ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ನಡೆಯಬೇಕಿತ್ತು. ಆದರೆ ಜಾಗದ ಅಭಾವದಿಂದ ನಮ್ಮ ಮನೆಯಲ್ಲಿ ಆಯೋಜನೆ ಮಾಡಲಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇದು ಪಕ್ಷದ ಸಭೆಯಲ್ಲ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ. ಶರತ್ ಬಚ್ಚೇಗೌಡ ನಮ್ಮ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಬೆಂಬಲ ಕೇಳಿದ್ದಾರೆ, ನಾವು ಬೆಂಬಲ ನೀಡಲು ಒಪ್ಪಿದ್ದೇವೆ. ನಾವು ಕೂಡ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಹೇಳಿದರು. ಮುಂದೆ ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿ ಆಡಳಿತದ ವಿರುದ್ಧ ಹೋರಾಟ ಮಾಡೋಣ. ಸರ್ಕಾರ ಪ್ರತಿ ದಿನ ಜನರ ಮನೆ ಬಾಗಿಲು ಬಡಿಯುತ್ತಿದೆ. ಜನ ಭಯದಿಂದ ನಡುಗುತ್ತಿದ್ದಾರೆ. ದುರಾಡಳಿತದಿಂದ ಜನರಿಗೆ ಮುಕ್ತಿ ಕೊಡಿಸಬೇಕಿದೆ ಎಂದರು.
ಕಾಂಗ್ರೆಸ್ಗೆ ಬೆಂಬಲ ವ್ಯಕ್ತ ಪಡಿಸಿದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನದ ಪ್ರಕಾರ ನಾಯಕರು ಯಾರ ಹೊಟ್ಟೆಯಿಂದಲೂ ಹುಟ್ಟುವುದಿಲ್ಲ, ಜನ ಮತ ಹಾಕಿದರೆ ಮಾತ್ರ ನಾಯಕರು ಹುಟ್ಟುತ್ತಾರೆ ಎಂದರು.
ಇದು ನನ್ನ ಸ್ವಾರ್ಥ ಅಲ್ಲ, ನನಗೆ ಮತ ಹಾಕಿದವರ ಹಿತಕ್ಕಾಗಿ ರಾಜಕೀಯ ನಿರ್ಧಾರ ತೆಗೆದುಕೊಂಡಿದ್ದೇನೆ. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸರ್ಧೆ ಮಾಡಿ ಸ್ವಾಭಿಮಾನಿಯಾಗಿ ವಿಧಾನಸಭೆ ಆಯ್ಕೆಯಾಗಿದ್ದೇನೆ. ಮುಂದೆಯೂ ಸ್ವತಂತ್ರ ಶಾಸಕನಾಗಿ ಮುಂದುವರೆಯುತ್ತೇನೆ ಎಂದರು.
ಹೊಸಕೋಟೆ ತಾಲ್ಲೂಕು ದ್ವೀಪ ಆಗಿದೆ. ದೌರ್ಜನ್ಯಗಳು, ಶಿಷ್ಠಚಾರ ಉಲ್ಲಂಘನೆಗಳು, ಅಕಾರಿಗಳ, ಪೊಲೀಸರ ದುರ್ಬಳಕೆ ಹೆಚ್ಚಾಗಿದೆ. ಈ ಎಲ್ಲದರ ವಿರುದ್ಧ ನಾವು ಹೋರಾಟ ಮಾಡಬೇಕಿದೆ. ನಾವು ಎಷ್ಟೇ ಶ್ರಮ ಹಾಕಿದರೂ ಅಭಿವೃದ್ಧಿಗೆ ಅದು ಸಾಲುತ್ತಿಲ್ಲ. ಅದಕ್ಕಾಗಿ ಕಾಂಗ್ರೆಸ್ ಬೆಂಬಲ ಕೋರುತ್ತಿದ್ದೇನೆ. ನಾನು ಕೂಡ ಕಾಂಗ್ರೆಸ್ಗೆ ಬಾಹ್ಯ ಬೆಂಬಲ ನೀಡುತ್ತೇನೆ ಎಂದು ಹೇಳಿದರು.
ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ರಮೇಶ್ ಕುಮಾರ್, ಜಮೀರ್ ಅಹಮದ್, ಕೃಷ್ಣಬೈರೇಗೌಡ, ಶಾಸಕಾಂಗ ಪಕ್ಷದ ಕಾರ್ಯದರ್ಶಿ ತುಕರಾಂ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಸದಸ್ಯರಾದ ಎಂ.ನಾಯಾರಣಸ್ವಾಮಿ, ರವಿ, ನಜೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕರಾದ ಬೈರತಿ ಸುರೇಶ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪ ಅಮರ್ನಾಥ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾದ ಮುನಿಸ್ವಾಮಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.