ಶಾಸಕ ಸುರೇಶ್‍ಕುಮಾರ್ ಉಪವಾಸ ಸತ್ಯಾಗ್ರಹಕ್ಕೆ ಮಣಿದ ಕೆಪಿಎಸ್‍ಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.3- ಕೆಎಎಸ್ ಅಭ್ಯರ್ಥಿಗಳ ಸಂದರ್ಶನದ ದಿನಾಂಕವನ್ನು ಪ್ರಕಟಿಸಬೇಕೆಂದು ಆಗ್ರಹಿಸಿ ಶಾಸಕ ಸುರೇಶ್‍ಕುಮಾರ್ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಕ್ಕೆ ಬಗ್ಗಿದ ಕೆಪಿಎಸ್‍ಸಿ ಅಧಿಕಾರಿಗಳು ಕಡೆಗೂ ದಿನಾಂಕ ಪ್ರಕಟಿಸಿದ್ದಾರೆ.

ಜು.29ರಂದು ಕೆಎಎಸ್ ಅಭ್ಯರ್ಥಿಗಳ ಸಂದರ್ಶನಕ್ಕೆ ದಿನಾಂಕ ನಿಗದಿ ಮಾಡಿ ಲಿಖಿತ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸುರೇಶ್‍ಕುಮಾರ್ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ. ಇಂದು ಬೆಳಗ್ಗೆ 8 ಗಂಟೆಗೆ ಕೆಪಿಎಸ್‍ಸಿ ಎದುರು ಸುರೇಶ್‍ಕುಮಾರ್ ಅಭ್ಯರ್ಥಿಗಳೊಂದಿಗೆ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು.

ಅವರ ಉಪವಾಸ ಸತ್ಯಾಗ್ರಹ ಅರಿತ ಕೂಡಲೇ ಕೆಪಿಎಸ್‍ಸಿ ಕಾರ್ಯದರ್ಶಿ ಜನ್ನು ಅವರು 2015ರ ಗೆಜೆಟೆಡ್ ಪ್ರೊಬೆಷನರ್ ಬ್ಯಾಚ್ ಅಭ್ಯರ್ಥಿಗಳಿಗೆ ಜು.29 ರಿಂದ ಸಂದರ್ಶನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಲಿಖಿತವಾಗಿ ತಿಳಿಸಿದ್ದಾರೆ.

ಎಲ್ಲ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕದ ಭರವಸೆ ಲಿಖಿತವಾಗಿ ದೊರೆತಿರುವುದರಿಂದ ನಾನು ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದೇನೆ ಹಾಗೂ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಈ ವೇಳೆ ಸುರೇಶ್‍ಕುಮಾರ್ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಸುರೇಶ್‍ಕುಮಾರ್ ಅಭ್ಯರ್ಥಿಗಳೊಂದಿಗೆ ಕೆಪಿಎಸ್‍ಸಿ ಮುಂದೆ ಪ್ರತಿಭಟನೆ ಕೂಡ ನಡೆಸಿದ್ದರು.

ಕೆಪಿಎಸ್‍ಇ ಕಾರ್ಯವೈಖರಿ ಬದಲಾವಣೆಯಾಗದಿದ್ದರೆ ಈ ಸಂಸ್ಥೆಯ ಸ್ಥಾಪನೆಯ ಉದ್ದೇಶವೇ ವಿಫಲವಾಗುತ್ತದೆ. ಜು.29ರಿಂದ ಪ್ರಾರಂಭವಾಗುವ ಸಂದರ್ಶನ ಹೋಟಾ ಸಮಿತಿಯ ಶಿಫಾರಸಿನಂತೆ ಪಾರದರ್ಶಕವಾಗಿ ನಡೆಯಬೇಕು ಹಾಗೂ ಯಾವುದೇ ಅನ್ಯಾಯಕ್ಕೆ ಅವಕಾಶ ನೀಡಬಾರದು ಎಂದು ಸುರೇಶ್‍ಕುಮಾರ್ ಈ ವೇಳೆ ಆಗ್ರಹಿಸಿದರು.

2015ರ ಬ್ಯಾಚ್‍ನ ಕೆಎಎಸ್ ಅಧಿಕಾರಿಗಳ ಆಯ್ಕೆಗಾಗಿ 12.05.2017ರಂದು ಅಧಿಸೂಚನೆ ಹೊರಬಿದ್ದಿತ್ತು. ಅದರ ಪೂರ್ವಭಾವಿ ಪರೀಕ್ಷೆ 20.08.2017ರಂದು ನಡೆದಿತ್ತು. ಮುಖ್ಯ ಪರೀಕ್ಷೆ 2017ರ ಡಿಸೆಂಬರ್ 16 ರಿಂದ 23ರ ವರೆಗೆ ನಡೆದಿತ್ತು.

ಆದರೆ, ಒಂದು ವರ್ಷ ಕಳೆದರೂ ಫಲಿತಾಂಶ ದೊರೆತಿರಲಿಲ್ಲ. ಹಾಗಾಗಿ ಕೆಪಿಎಸ್‍ಸಿ ಅಧ್ಯಕ್ಷರು, ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಫಲಿತಾಂಶ ಬೇಗ ಪ್ರಕಟಿಸಬೇಕೆಂದು ಸುರೇಶ್‍ಕುಮಾರ್ ಆಗ್ರಹಿಸಿದ್ದರು. ಅಲ್ಲದೆ ಮುಖ್ಯಮಂತ್ರಿಗಳಿಗೂ ಈ ಕುರಿತು ಪತ್ರ ಬರೆದಿದ್ದರು.

Facebook Comments

Sri Raghav

Admin