ಕೊಲೆ ಸಂಚಿನ ಆರೋಪ, ಡ್ಯಾಮೇಜ್ ಕಂಟ್ರೋಲ್‍ಗೆ ಕಾಂಗ್ರೆಸ್ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಆಡಳಿತಾರೂಢ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂಬ ಗಂಭೀರ ಆರೋಪ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದ್ದು, ಡ್ಯಾಮೇಜ್ ಕಂಟ್ರೋಲ್‍ಗೆ ಹಲವು ರೀತಿಯ ಸರ್ಕಸ್‍ಗಳನ್ನು ನಡೆಸಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪರ ವಿರೋಧ ವ್ಯಾಖ್ಯಾನಗಳು ಪಕ್ಷದಲ್ಲಿ ಜೋರಾಗಿವೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ವಿಶ್ವನಾಥ್‍ರ ವಿರುದ್ಧ ಸ್ಪರ್ಧೆ ಮಾಡಿ ಮೂರನೇ ಸ್ಥಾನ ಪಡೆದಿದ್ದ ಗೋಪಾಲ್ ಕೃಷ್ಣ ಅವರು ಕುಳ್ಳ ದೇವರಾಜ್ ಅವರ ಜೊತೆ ನಡೆಸಿರುವ ಸಂಭಾಷಣೆಯ ಮೂರು ಗಂಟೆಗಳವರೆಗಿನ ವಿಡಿಯೋ ನಿನ್ನೆಯಿಂದ ಭಾರೀ ಸಂಚಲನ ಮೂಡಿಸಿದೆ.

ಕಾಂಗ್ರೆಸ್‍ನಲ್ಲಿದ್ದ ದೇವರಾಜ್ ಈಗ ಬಿಜೆಪಿಯಲ್ಲಿದ್ದು, ತಾವೇ ಮಾಡಿದ ವಿಡಿಯೋವನ್ನು ಶಾಸಕ ವಿಶ್ವನಾಥ್‍ರಿಗೆ ತಲುಪಿಸಿದ್ದಾರೆ. ಜೊತೆಯಲ್ಲಿ ಕ್ಷಮಾಪಣಾ ಪತ್ರವನ್ನು ಬರೆದು ಮಾಫಿ ಸಾಕ್ಷಿಯಾಗಲು ಬಯಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಗೋಪಾಲಕೃಷ್ಣರನ್ನು ಸಮರ್ಥಿಸಿಕೊಳ್ಳುತ್ತಿದೆ.

ದೇವರಾಜ್ ಜೊತೆ ಲೋಕಾಭಿಮರಾಗಿ ಹರಟ್ಟಿದ್ದನ್ನೇ ಆಧಾರವಾಗಿಟ್ಟುಕೊಂಡು ಕೊಲೆಗೆ ಸಂಚು ಎಂದು ಬಿಜೆಪಿ ಶಾಸಕರು ಬಿಂಬಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿ ಅಧಿಕಾರದಲ್ಲಿರುವ ಅಹಂನಿಂದ ಅಧಿಕಾರಿಗಳನ್ನು ಬಳಸಿಕೊಂಡು ಪ್ರತಿಪಕ್ಷಗಳ ಮುಖಂಡರನ್ನು ಹೆದರಿಸುವ ಪ್ರಯತ್ನ ನಡೆಸಿದೆ ಎಂಬ ಆರೋಪಗಳನ್ನು ಮಾಡ ಲಾಗಿದೆ.

ಬೆಂಗಳೂರಿನಲ್ಲಿ ತಮ್ಮ ಮನೆಯ ಮುಂದಿನ ವಾಹನಗಳಿಗೆ ಬೆಂಕಿ ಬಿದ್ದ ಪ್ರಕರಣವನ್ನು ಮುಂದಿಟ್ಟುಕೊಂಡು ಶಾಸಕರೊಬ್ಬರು ತಮ್ಮ ವಿರುದ್ಧ ಕಳೆದ ಚುನಾವಣೆಯಲ್ಲಿ ಬಂಡಾಯವಾಗಿ ಸ್ರ್ಪಧಿಸಿದ್ದ ತಮ್ಮದೇ ಪಕ್ಷದ ನಾಯಕನ್ನು ಸಿಲುಕಿಸುವ ಪ್ರಯತ್ನ ನಡೆಸಿದ್ದರು. ಅದು ಸಾಧ್ಯವಾಗದಿದ್ದಾಗ ಸರ್ಕಾರದ ಮೇಲೆ ಒತ್ತಡ ಹೇರಿ ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಮಾಡಿದರು.

ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗದೆ ಹಲವಾರು ಶಾಸಕರು ಅಸಮಾಧಾನದಿಂದ ಕುದಿಯುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿಯವರು ಶಾಸಕರು ಹೇಳಿದ್ದಕ್ಕೆಲ್ಲಾ ಮರು ಮಾತನಾಡದೆ ಅಸ್ತು ಎನ್ನಬೇಕಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ಆಡಳಿತಾರೂಢ ಶಾಸಕರು ತಮ್ಮ ಎದುರಾಳಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂಬ ಆರೋಪ ಕಾಂಗ್ರೆಸ್ ವಲಯದಿಂದ ಕೇಳಿ ಬಂದಿವೆ.

ಮತ್ತೊಂದೆಡೆ ಗೋಪಾಲಕೃಷ್ಣ ಆಡಿಯೋದಲ್ಲಿ ಮಾತನಾಡಿರುವ ಉದ್ದೇಶದ ಬಗ್ಗೆ ಕಾಂಗ್ರೆಸ್ ಒಳಗೆ ಅಸಮದಾನವೂ ಇದೆ. ಸಾರ್ವಜನಿಕ ಜೀವನದಲ್ಲಿ ಪ್ರಜಾಸತಾತ್ಮಕ ಮಾದರಿಯಲ್ಲೇ ಎದುರಾಳಿಗಳನ್ನು ಎದುರಿಸಬೇಕೆ ಹೊರತು ಅಡ್ಡದಾರಿ ಹಿಡಿಯ ಬಾರದು ಎಂದು ಬುದ್ದಿ ಮಾತುಗಳು ಕೇಳಿ ಬಂದಿವೆ.

ಈ ಹಿಂದೆ ಪುಲಕೇಶಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ರಾಜಕೀಯವಾಗಿ ಹಿಂದೆ ಸರಿಯುವಂತೆ ಮಾಡಲು ದೊಡ್ಡ ಗಲಭೆಯನ್ನೇ ಸೃಷ್ಟಿಸಲಾಯಿತು. ಶಾಸಕರ ಮನೆಗೆ ಬೆಂಕಿ ಹಚ್ಚಲಾಯಿತು. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಪ್ರದೇಶಗಳಲ್ಲಿ ಉದ್ರಿಕ್ತ ವಾತಾವರಣ ನಿರ್ಮಿಸಲಾಯಿತು. ಪ್ರಕರಣದಲ್ಲಿ ಪಾತ್ರಧಾರಿಗಳಾಗಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್‍ನ ಮಾಜಿ ಮೇಯರ್ ಸಂಪತ್ತರಾಜ್‍ರನ್ನು ಪೊಲೀಸರು ಬಂಧಿಸಿದರು. ಆದರೂ ಕಾಂಗ್ರೆಸ್ ಅವರ ವಿರುದ್ಧ ಕ್ರಮ ಜರುಗಿಸಲಿಲ್ಲ.

ಈಗ ಯಲಹಂಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೂ ಆರೋಪ ಕೇಳಿ ಬಂದಿದೆ. ಆರೋಪದ ಸತ್ಯಾಸತ್ಯತೆ ಏನೇ ಇದ್ದರೂ ಮೊದಲು ಆರೋಪಕ್ಕೆ ಗುರಿಯಾದ ಮುಖಂಡನನ್ನು ಪಕ್ಷದಿಂದ ಹೊರ ಹಾಕಬೇಕಿತ್ತು. ಅದನ್ನು ಬಿಟ್ಟು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿ ಬಂದಿವೆ.

ಕಾಂಗ್ರೆಸ್ ಮೊದಲಿನಿಂದಲೂ ಶುದ್ಧ ರಾಜಕಾರಣವನ್ನು ಪ್ರತಿಪಾದನೆ ಮಾಡುತ್ತಾ ಬಂದಿದೆ. ಈ ರೀತಿ ಆರೋಪಕ್ಕೆ ಗುರಿಯಾದ ವರನ್ನು ಜೊತೆಯಲ್ಲಿಟ್ಟುಕೊಂಡರೆ ಜನ ಸಾಮಾನ್ಯರಿಗೆ ಕೆಟ್ಟ ಸಂದೇಶ ಕೊಟ್ಟಂತಾಗುತ್ತದೆ ಎಂಬ ವಾದಗಳಿವೆ.

ಬಿಜೆಪಿ ಅಕಾರ ದುರುಪ ಯೋಗ ಪಡಿಸಿಕೊಂಡು ಕಾಂಗ್ರೆಸ್ ಪಕ್ಷದ ನಾಯಕರನ್ನು ಹೆದರಿಸುವ ಪ್ರಯತ್ನ ನಡೆಸಿದೆ. ಇಂತಹ ಸಂಕಷ್ಟ ಕಾಲದಲ್ಲಿ ಪಕ್ಷವೂ ಮುಖಂಡರನ್ನು ಕೈಬಿಟ್ಟರೆ ಕಾರ್ಯಕರ್ತರ ಆತ್ಮವಿಶ್ವಾಸ ಕುಗ್ಗಲಿದೆ. ಆರೋಪ ಸಾಬೀತಾಗಿ ನ್ಯಾಯಾಲಯ ಶಿಕ್ಷೆ ವಿಸುವವರೆಗೂ ಆರೋಪಕ್ಕೆ ಗುರಿಯಾದ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಉನ್ನತ ನಾಯಕರು ಪಟ್ಟು ಹಿಡಿದಿದ್ದಾರೆ.

ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಷ್ಯಡ್ಯಂತ್ರಗಳನ್ನು ನಡೆಸುತ್ತಿದೆ. ನಾವು ಹೆದರಿ ಕೂಳಿತುಕೊಳ್ಳುವುದು ಬೇಡ. ಪ್ರತಿತಂತ್ರ ನಡೆಸೋಣ, ಸಂದರ್ಭ ಬಂದರೆ ಬೀದಿಗಿಳಿದು ಹೋರಾಟ ನಡೆಸೋಣ ಎಂಬ ಸವಾಲಿನ ಮಾತುಗಳು ಕಾಂಗ್ರೆಸ್‍ನಲ್ಲಿ ಕೇಳಿ ಬಂದಿವೆ. ಅದಕ್ಕಾಗಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಕಾಂಗ್ರೆಸ್ ಹಲವು ಸರ್ಕಸ್‍ಗಳನ್ನು ನಡೆಸುತ್ತಿದೆ.

Facebook Comments