ಶಾಸಕ ಯತ್ನಾಳ್‌ಗೆ ಶಾಕ್ ಕೊಟ್ಟ ಹೈಕಮಾಂಡ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.19- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾಡುತ್ತಿರುವ ಆರೋಪಗಳ ಬಗ್ಗೆ ಹೈಕಮಾಂಡ್ ನಿರ್ಲಕ್ಷಿಸಲು ಮುಂದಾಗಿದೆ. ಇನ್ನು ಮುಂದೆ ಯತ್ನಾಳ್ ಏನೇ ಹೇಳಿಕೆ ಕೊಟ್ಟರೂ ಅದನ್ನು ಪಕ್ಷವಾಗಲಿ, ಬೇರೆ ಯಾರೊಬ್ಬರೂ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ. ಟೀಕೆಗಳನ್ನು ತಳ್ಳಿಹಾಕುವಂತೆ ರಾಜ್ಯ ಘಟಕದ ನಾಯಕರಿಗೆ ವರಿಷ್ಠರು ಸೂಚನೆ ಕೊಟ್ಟಿದ್ದಾರೆ.

ಯತ್ನಾಳ್ ಹೇಳಿಕೆಯನ್ನು ಬೆಳೆಸುತ್ತಾ ಹೋದರೆ ಸರ್ಕಾರ ಮತ್ತು ಪಕ್ಷದ ನಡುವೆ ವ್ಯತ್ಯಾಸಗಳು ಉಂಟಾಗುತ್ತವೆ. ಒಬ್ಬ ವ್ಯಕ್ತಿಗೆ ಇಷ್ಟು ಪ್ರಾಮುಖ್ಯತೆ ಕೊಡುವ ಬದಲು ಅವರನ್ನು ಉದಾಸೀನ ಮಾಡುವುದೇ ಸರಿಯಾದ ಮಾರ್ಗ ಎಂಬುದು ವರಿಷ್ಠರ ಸೂಚನೆಯಾಗಿದೆ. ಇದೀಗ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಯತ್ನಾಳ್ ಏನೇ ಆರೋಪಗಳನ್ನು ಮಾಡುತ್ತಿದ್ದರೂ ಅದರ ಬಗ್ಗೆ ತುಟಿಕ್‍ಪಿಟಿಕ್ ಎನ್ನದೆ ನಿರ್ಲಕ್ಷ್ಯ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಂತಾಗಿದೆ.

ಸಿಎಂ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕುರಿತು ಶಾಸಕ ಯತ್ನಾಳ್ ಅವರು ಗಂಭೀರ ಆರೋಪಗಳನ್ನು ಮಾಡಿದ್ದರು.
ಆ ಕುರಿತು ಬೆಂಗಳೂರಿನ ಕುಮಾರ ಕೃಪಾ ಅತಿಥಿಗೃಹದಲ್ಲಿ ಪ್ರತಿಕ್ರಿಯೆ ನೀಡಿರುವ ಅರುಣ್ ಸಿಂಗ್, ಅವುಗಳೆಲ್ಲಾ ಸತ್ಯಕ್ಕೆ ದೂರವಾದ ಆರೋಪಗಳು. ಅವನ್ನು ತಳ್ಳಿಹಾಕುವುದು ಸೂಕ್ತ ಎಂದಿದ್ದಾರೆ.

ಇಂತಹ ಗಂಭೀರ ಆರೋಪ ಮಾಡಿರುವ ಕಾರಣದಿಂದಲೇ ಈಗಾಗಲೆ ಅವರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ. ಸೂಕ್ತ ಸಮಯದಲ್ಲಿ ಶಿಸ್ತು ಸಮಿತಿ ಕ್ರಮಕೈಗೊಳ್ಳುತ್ತದೆ. ಬಿ.ವೈ. ವಿಜಯೇಂದ್ರ ನಮ್ಮ ಪಕ್ಷದ ಉಪಾಧ್ಯಕ್ಷ. ಸಹಜವಾಗಿಯೇ ನಾವು ಉಪಾಧ್ಯಕ್ಷರನ್ನೇ ಬೆಂಬಲಿಸುತ್ತೇವೆ ಎಂದಿರುವ ಅರುಣ್ ಸಿಂಗ್, ಶಾಸಕ ಯತ್ನಾಳ್ ಅವರ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.

ಸೋ ಕಾಲ್ಡ್ ಶಾಸಕರ ಪೃವೃತ್ತಿ ಎಲ್ಲರಿಗೂ ಗೊತ್ತಿದೆ. ಅವರ ಹೇಳಿಕೆಯನ್ನು ನಾನು ತಿರಸ್ಕರಿಸುತ್ತೇನೆ. ಅವರು ಏನೇ ಮಾತನಾಡಿದರೂ ಅದು ತಪ್ಪು. ಬಹಳ ವರ್ಷಗಳಿಂದ ಅವರನ್ನು ಎಲ್ಲರೂ ನೋಡಿದ್ದಾರೆ. ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಯತ್ನಾಳ್ ಉತ್ತರವನ್ನು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ್ದ ಶಾಸಕ ಯತ್ನಾಳ್ ಅವರು, ಬಿಹಾರ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಹಿನ್ನಡೆಯಾಗಲಿ ಎಂದು ಬಿ.ವೈ.ವಿಜಯೇಂದ್ರ ಅವರು ಆರ್‍ಜೆಡಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಫಂಡಿಂಗ್ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು.

Facebook Comments