ಹಿಂದುತ್ವದ ಪರವಾಗಿ ಸರ್ಕಾರ ಇರಬೇಕು : ಶಾಸಕ ಯತ್ನಾಳ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ಕೇಂದ್ರ ವರಿಷ್ಠರು ಸಂಪುಟ ಸೇರಲು ಹೇಳಿದರೆ ತಾವು ಸಚಿವನಾಗಲು ಸಿದ್ಧ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸುವ ವ್ಯಕ್ತಿಯಲ್ಲ ನಾನು. ಆದರೆ ಸಚಿವನಾಗುವಂತೆ ವರಿಷ್ಠರು ಸೂಚಿಸಿದರೆ ಆ ಸ್ಥಾನ ಅಲಂಕರಿಸಲು ಸಿದ್ಧ ಎಂದರು.
ಮಂತ್ರಿ ಸ್ಥಾನಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ.

ನನ್ನಲ್ಲಿನ ಸಂಘಟನೆಯ ಸಾಮಥ್ರ್ಯ , ಪ್ರಾಮಾಣಿಕತೆಯನ್ನು ಗುರುತಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರ ಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಈಗ ಅದಕ್ಕಾಗಿ ಕೈ ಕಾಲು ಹಿಡಿಯುವ ಹಂತಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದುತ್ವದ ಪರವಾಗಿ ಸರ್ಕಾರ ಇರಬೇಕು. ಭ್ರಷ್ಟಾಚಾರ ಮುಕ್ತವಾದ ಆಡಳಿತ ಕೊಡಬೇಕು. ಇದು ನಮ್ಮ ಉದ್ದೇಶ. ಕೆಲವು ನಿರೀಕ್ಷೆಗಳು ಬದಲಾವಣೆಯಾಗಿವೆ. ಕಾಲ ಕಾಲಕ್ಕೆ ಇನ್ನು ಬದಲಾವಣೆಯಾಗಲಿದೆ. ಅದನ್ನು ನೀವೇ ಕಾದು ನೋಡಿ ಎಂದು ಹೇಳಿದರು.

ಬೊಮ್ಮಾಯಿ ಅವರು ಯಾರ ಹಂಗಿಲ್ಲದೆ ಆಡಳಿತ ನಡೆಸಲಿದ್ದಾರೆ. ಇನ್ನೊಬ್ಬರ ಕೈಗೊಂಬೆ ಎಂಬಂತಹ ಊಹಾಪೋಹ ಬೇಡ. ಭ್ರಷ್ಟಾಚಾರ ರಹಿತ ಆಡಳಿತವನ್ನು ಕೊಟ್ಟೇ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿಂದೆಯೂ ಎಲ್ಲಾ ಶಾಸಕರ ಬೇಕು, ಬೇಡಗಳನ್ನು ಅವರು ಈಡೇರಿಸಿದ್ದರು. ಅವರು ಶಾಸಕರ ಹಿತ ಕಾಪಾಡುವರೆಂಬ ಭರವಸೆ ಇದೆ. ಅವರಿಗೆ ಅಪಾರ ಅನುಭವವೂ ಇದೆ ಎಂದರು.

Facebook Comments