ಉಭಯ ಸದನಗಳಲ್ಲಿ ಯತ್ನಾಳ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.3- ನಕಲಿ ಗಾಂಧಿ, ಪಾಕ್ ಪರ ಏಜೆಂಟ್ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಬಸವನಗೌಡ ಯತ್ನಾಳ್ ಅವರ ಹೇಳಿಕೆ ಖಂಡಿಸಿ ಇಂದು ಕೂಡ ಕಾಂಗ್ರೆಸ್ ಉಭಯ ಸದನಗಳಲ್ಲಿ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಇಂದು ಈ ಬಗ್ಗೆ ಸಮಾಲೋಚನೆ ನಡೆಸಿದ ಸದಸ್ಯರು ಯತ್ನಾಳ್ ಅವರ ನೈತಿಕತೆಯನ್ನು ಪ್ರಶ್ನೆ ಮಾಡಲು ನಿರ್ಧರಿಸಿದ್ದಾರೆ.  ಯತ್ನಾಳ್ ವಿರುದ್ಧ ಕ್ರಿಮಿನಲ್, ವಂಚನೆ ಪ್ರಕರಣ ಸೇರಿದಂತೆ 43 ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ದನಿ ಎತ್ತಲು ಮುಂದಾಗಿದ್ದಾರೆ.

ಸಂಸ್ಕøತಿಯ ವಾರಸುದಾರರಂತೆ ವರ್ತಿಸುವ ಬಿಜೆಪಿಯವರು ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.ಕನಿಷ್ಟ ಸೌಜನ್ಯಕ್ಕಾದರೂ ಕ್ಷಮೆ ಯಾಚಿಸುವ ಬಗ್ಗೆ ಮಾತನಾಡುತ್ತಿಲ್ಲ. ಸ್ವಾತಂತ್ರ್ಯ ಸೇನಾನಿಗಳಿಗೇ ಈ ರೀತಿಯಾದರೆ ನಾವು ಸುಮ್ಮನೆ ಕೂರುವುದು ಸರಿಯಲ್ಲ. ಹೋರಾಟವನ್ನು ಮುಂದುವರಿಸೋಣ ಎಂಬ ನಿರ್ಧಾರವನ್ನು ಸಿಎಲ್‍ಪಿ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಕೇವಲ ಒಬ್ಬ ವ್ಯಕ್ತಿಗೋಸ್ಕರ ಸರ್ಕಾರ ಮೊಂಡುತನಕ್ಕೆ ಬಿದ್ದಿದೆ. ಸಾಕಷ್ಟು ಜ್ವಲಂತ ಸಮಸ್ಯೆಗಳ ಚರ್ಚೆಗೆ ಅವಕಾಶವಿಲ್ಲದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂದಿವೆ. ಹೀಗಾಗಿ ಇಂದು ಕೂಡ ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.

ಕೊರೋನಾ ವೈರಸ್ ಭೀತಿ ರಾಜ್ಯಕ್ಕೆ ಎದುರಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಪತ್ತೆಯಾಗಿರುವುದರಿಂದ ಹೈ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಪ್ರತಿಷ್ಠೆ, ಜಿದ್ದಾಜಿದ್ದಿ ಎದುರಾಗಿದೆ. ಸರ್ಕಾರ ಬಗ್ಗುತ್ತಿಲ್ಲ-ಪ್ರತಿಪಕ್ಷ ಜಗ್ಗುತ್ತಿಲ್ಲ ಎನ್ನುವಂತಾಗಿದೆ.

Facebook Comments