ಶಾಸಕ ಜಮೀರ್ ಅಹಮ್ಮದ್‌ಗೆ ಸಿಸಿಬಿ ನೋಟಿಸ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.13- ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಸಿಸಿಬಿ ಪ್ರಶಾಂತ್ ಸಂಬರಗಿ ಅವರನ್ನು ವಿಚಾರಣೆ ನಡೆಸಿದ ಬೆನ್ನಲ್ಲೇ ಶಾಸಕ ಜಮೀರ್ ಅಹಮ್ಮದ್ ಅವರಿಗೆ ನೋಟಿಸ್ ನೀಡಲು ಮುಂದಾಗಿದೆ.

ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜಮೀರ್, ಸಂಜನಾ, ಶ್ರೀಲಂಕಾದ ಕ್ಯಾಸಿನೋ ಪ್ರಸ್ತಾಪಿಸಿ ಆರೋಪ ಮಾಡಿದ್ದ ಪ್ರಶಾಂತ್ ಸಂಬರಗಿ ಅವರಿಗೆ ನೋಟಿಸ್ ನೀಡಿ ನಿನ್ನೆ ಸಿಸಿಬಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ. ಈ ಬೆನ್ನಲ್ಲೇ ಶಾಸಕ ಜಮೀರ್ ಅಹಮ್ಮದ್ ಅವರಿಗೂ ಕೂಡ ವಿಚಾರಣೆಗೆ ಬಂದು ತಮ್ಮಲ್ಲಿರುವ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿರುವುದು ತಿಳಿದುಬಂದಿದೆ.

ಸಂಬರಗಿ ಅವರು ಜಮೀರ್, ಶೇಖ್ ಫೈಜಲ್ ಅವರ ನಡುವಿನ ನಂಟು ಹಾಲಿವುಡ್, ಬಾಲಿವುಡ್‍ಗಿರುವ ಸಂಬಂಧ, ಶ್ರೀಲಂಕಾದ ಕ್ಯಾಸಿನೋಗೆ ಸಂಜನಾ, ಜಮೀರ್ ಹೋಗಿರುವ ಬಗ್ಗೆ ಹಲವು ಆರೋಪಗಳನ್ನು ಬಹಿರಂಗವಾಗಿಯೇ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಬರಗಿ ವಿರುದ್ಧ ಜಮೀರ್ ದೂರು ನೀಡಿದ್ದು, ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ನಿನ್ನೆ ಸಂಬರಗಿ ಸಿಸಿಬಿ ಎದುರು ವಿಚಾರಣೆಗೆ ಹಾಜರಾಗುತ್ತಿದ್ದಂತೆ ಜಮೀರ್ ಅವರು ಶ್ರೀಲಂಕಾಗೆ ಹೋಗಿದ್ದರ ಬಗ್ಗೆ ಪ್ರಸ್ತಾಪಿಸಿ ಅದರಲ್ಲಿ ತಪ್ಪೇನಿದೆ, ಅಲ್ಲಿ ನಡೆಯುವ ಕ್ಯಾಸಿನೋಗೆ ಅನುಮತಿ ಇದೆ. ನಾನು ಒಂದೂವರೆ ವರ್ಷಕ್ಕೆ ಒಂದು ಬಾರಿ ಹೋಗುತ್ತೇನೆ.

ನಾನೊಬ್ಬನೇ ಅಲ್ಲ, ಕುಮಾರಸ್ವಾಮಿ, ಜೆಡಿಎಸ್ ಶಾಸಕರು ಶ್ರೀಲಂಕಾಗೆ ಹೋಗಿದ್ದರು. ಎಲ್ಲರಿಗಿಂತ ಹೆಚ್ಚು ಬಿಜೆಪಿಯವರೇ ಶ್ರೀಲಂಕಾಗೆ ಹೋಗಿರುವುದು ಎಂದು ಹೇಳಿಕೆ ನೀಡಿದ್ದರು.

ಈ ಎಲ್ಲ ಹೇಳಿಕೆಗಳ ಹಿನ್ನೆಲೆಯಲ್ಲಿ ಸಿಸಿಬಿ ಜಮೀರ್‍ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ ಜಮೀರ್ ಸೋಮವಾರ ಬಾಂಬ್ ಬಿಚ್ಚುತ್ತೇನೆ ಎಂದು ಹೇಳಿದ್ದಾರೆ. ಒಟ್ಟಾರೆ ಡ್ರಗ್ಸ್ ದಂಧೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಯಾರ ಕೊರಳಿಗೆ ಉರುಳಾಗಲಿದೆಯೋ ಕಾದು ನೋಡಬೇಕು.

Facebook Comments