ಸಂಪತ್ ರಾಜ್ ಬಂಧನ ಕುರಿತು ಶಾಸಕ ಅಖಂಡ ಶ್ರೀನಿವಾಸ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17- ಸಂಪತ್ ರಾಜ್ ಬಂಧನದ ನಂತರವಾದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮನ್ನು ಬೆಂಬಲಿಸಬೇಕು ಎಂದು ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನವಿ ಮಾಡಿದ್ದಾರೆ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗುಂಪು ಗಲಭೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ನಿನ್ನೆ ರಾತ್ರಿ ಬಂಧಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷ ತಮ್ಮ ರಕ್ಷಣೆಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹಮದ್ ಅವರು ತಮಗೆ ಬೆಂಬಲ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಂತೆ ಮನವಿ ಮಾಡುತ್ತೇನೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಹೇಳಿದರು.

ಗಲಭೆ ಪ್ರಕರಣದಲ್ಲಿ ಸಂಪತ್ ರಾಜ್ ಅವರ ಬಲಗೈ ಬಂಟರಾದ ಸಂತೋಷ್ ಮತ್ತು ಅರುಣ್ ಆರೋಪಿಗಳಾಗಿ ಬಂಧಿತರಾಗಿದ್ದಾರೆ. ಅವರಿದ್ದ ಮೇಲೆ ಸಂಪತ್ ರಾಜ್ ಅವರ ಪಾತ್ರ ಇದ್ದೇ ಇರುತ್ತದೆ. ನನ್ನನ್ನು ಪುಲಕೇಶಿನಗರ ಕ್ಷೇತ್ರದ ಜನ ರಾಜ್ಯದಲ್ಲೇ ಅತ್ಯಧಿಕ ಮತಗಳನ್ನು ನೀಡಿ ಆಯ್ಕೆ ಮಾಡಿದ್ದಾರೆ.

ನಾನು ಕ್ಷೇತ್ರದಲ್ಲಿ ಯಾವತ್ತೂ ದ್ವೇಷದ ರಾಜಕೀಯ ಮಾಡಿದವನಲ್ಲ. ಏಳು ಮಂದಿ ಬಿಬಿಎಂಪಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸುತ್ತಿದ್ದೇನೆ. ಸಂಪತ್‍ರಾಜ್ ಅವರು ನನ್ನ ಜತೆ ಓಡಾಡುತ್ತಾ, ಮಾತನಾಡಿಕೊಂಡು ಚೆನ್ನಾಗಿದ್ದರು. ಆದರೆ, ಯಾವ ಕಾರಣಕ್ಕಾಗಿ ಈ ರೀತಿ ಮಾಡಿದರು ಗೊತ್ತಿಲ್ಲ ಎಂದರು.

ಒಂದು ವೇಳೆ ಅವರು ನಿರಪರಾಧಿಯೇ ಆಗಿದ್ದರೆ ಆಸ್ಪತ್ರೆಯಿಂದ ತಲೆಮರೆಸಿಕೊಂಡು ಹೋಗಿದ್ದೇಕೆ ? ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರ ಮುಂದೆ ನೇರವಾಗಿ ಹಾಜರಾಗಬಹುದಿತ್ತು. ಅದನ್ನು ಬಿಟ್ಟು ಪರಾರಿಯಾಗಿದ್ದರು.  ಗಲಭೆಯಲ್ಲಿ ಸಾಕಷ್ಟು ಹಾನಿಯಾಗಿದೆ. ನಾಲ್ಕು ಮಂದಿ ಅಮಾಯಕರು ಸತ್ತಿದ್ದಾರೆ. ಬಹಳಷ್ಟು ಮಂದಿ ಅಮಾಯಕರು ಜೈಲಿನಲ್ಲಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅಮಾಯಕರನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು.

ನಮ್ಮ ಮನೆ ಪೂರ್ಣ ಸುಟ್ಟು ಹೋಗಿದೆ. ನಮ್ಮ ಸಂಬಂಧಿಕರ ಮನೆಗಳಿಗೂ ಬೆಂಕಿ ಹಚ್ಚಲಾಗಿದೆ. ನಮ್ಮದು ಅವಿಭಕ್ತ ಕುಟುಂಬ. ಈಗ ಅಲ್ಲೊಬ್ಬರು, ಇಲ್ಲೊಬ್ಬರು ವಾಸಮಾಡುವಂತಾಗಿದೆ ಎಂದು ಅಖಂಡ ಶ್ರೀನಿವಾಸ ಮೂರ್ತಿ ಬೇಸರ ವ್ಯಕ್ತಪಡಿಸಿದರು.

Facebook Comments