ಶಾಸಕರ ರಾಜೀನಾಮೆ-ಅನರ್ಹತೆ ಪ್ರಕರಣ : ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು, ಸುಪ್ರೀಂನಲ್ಲಿ ಏನೇನಾಯ್ತು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.16- ತಾವು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಲು ಸ್ಪೀಕರ್‍ಗೆ ನಿರ್ದೇಶನ ನೀಡಬೇಕೆಂದು 15 ಮಂದಿ ಶಾಸಕರು ನೀಡಿದ್ದ ಮನವಿಯ ವಾದ-ವಿವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಸಲಿದೆ.

ಇಂದು ಸುಮಾರು 3 ಗಂಟೆ 45 ನಿಮಿಷಗಳ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಯ್, ದೀಪಕ್ ಗುಪ್ತಾ ಹಾಗೂ ಅನಿರುದ್ಧ್ ಬೋಸ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಬುಧವಾರ ಬೆಳಗ್ಗೆ 10.30ಕ್ಕೆ ಅಂತಿಮ ತೀರ್ಪು ನೀಡುವುದಾಗಿ ಆದೇಶವನ್ನು ಕಾಯ್ದಿರಿಸಿದೆ.

ಅಲ್ಲದೆ ಕಳೆದ ಶುಕ್ರವಾರ ನೀಡಿರುವ ಯಥಾಸ್ಥಿತಿ ಆದೇಶ ತೀರ್ಪು ಪ್ರಕಟವಾಗುವವರೆಗೂ ಮುಂದುವರೆಯಲಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು. ನಾಳೆ ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ಕರ್ನಾಟಕ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ತೀರ್ಮಾನಿಸಲಿದೆ. ಹೀಗಾಗಿ ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎಂಬುದನ್ನು ರಾಜ್ಯದ ಜನತೆ ಚಾತಕ ಪಕ್ಷಿಯಂತೆ ಕಾಯ್ತುತ್ತಿದ್ದಾರೆ.

ಇದಕ್ಕೂ ಮುನ್ನ ರಾಜೀನಾಮೆ ನೀಡಿರುವ ಶಾಸಕರ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಲು ಕರ್ನಾಟಕದ ವಿಧಾನಸಭೆ ಸ್ಪೀಕರ್‍ಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ , ಸ್ಪೀಕರ್ ಹುದ್ದೆಯು ಸಾಂವಿಧಾನಿಕವಾಗಿದೆ. ಅವರಿಗೆ ಯಾವುದೇ ನ್ಯಾಯಾಲಯ ಇಂತಿಷ್ಟೇ ಸಮಯಾವಕಾಶದಲ್ಲಿ ರಾಜೀನಾಮೆ ಅಂಗೀಕರಿಸಲು ನಿರ್ದೇಶನ ನೀಡುವುದಕ್ಕೆ ಸಾಧ್ಯವಿಲ್ಲ ಎಂದರು.

ಮುಖ್ಯಮಂತ್ರಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್, ಶಾಸಕರು ರಾಜೀನಾಮೆ ನೀಡಿರುವುದು ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಒಬ್ಬ ವ್ಯಕ್ತಿಯ ಪ್ರಶ್ನೆಯಲ್ಲ.

ಸಾಮೂಹಿಕ ರಾಜೀನಾಮೆ ನೀಡಿರುವುದರಿಂದ ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿಯೇ ವಿಚಾರಣೆ ನಡೆಸಬೇಕು. ಹೀಗಾಗಿ ಸ್ಪೀಕರ್‍ಗೆ ವಿಚಾರಣೆ ನಡೆಸಲು ಸಮಯಾವಕಾಶ ನೀಡಿ ಎಂದು ಕೋರಿದರು. ಅಂತಿಮವಾಗಿ ಎರಡು ಕಡೆ ಸುದೀರ್ಘ ವಾದ-ವಿವಾದ ಆಲಿಸಿದ ನ್ಯಾಯಪೀಠ ಬೆಳಗ್ಗೆ 10.30ಕ್ಕೆ ತೀರ್ಪನ್ನು ನೀಡುವುದಾಗಿ ಆದೇಶ ಕಾಯ್ದಿರಿಸಿತು.

ಕಾವೇರಿದ ಚರ್ಚೆ: ಇದಕ್ಕೂ ಮುನ್ನ ರಾಜೀನಾಮೆ ನೀಡಿರುವ ಶಾಸಕರ ಪರ ವಕೀಲ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಶಾಸಕರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದಾಗ ಅದನ್ನು ಅಂಗೀಕರಿಸುವುದು ಅನಿವಾರ್ಯವಾಗುತ್ತದೆ. ಸ್ಪೀಕರ್ ಅವರು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ಶಾಸಕರು ನ್ಯಾಯಾಲಯದ ಮೊರೆ ಇಡಬೇಕಾಯಿತು ಎಂದು ಸಮರ್ಥಿಸಿಕೊಂಡರು.

ಸಂವಿಧಾನದ ಪರಿಚ್ಛೇದ 190ಹಾಗೂ 10ರ ಪ್ರಕಾರ ಜನಪ್ರತಿನಿಧಿಯೊಬ್ಬರು ತಮ್ಮ ಕೈಬರಹದಿಂದ ರಾಜೀನಾಮೆ ನೀಡಿದರೆ ಅಂಗೀಕರಿಸಲೇಬೇಕು. ಈ ಹಿಂದೆ ಶಾಸಕ ಡಾ.ಉಮೇಶ್‍ಜಾಧವ್ ರಾಜೀನಾಮೆ ನೀಡಿದಾಗ ಅದನ್ನು ಅಂಗೀಕರಿಸಲಾಗಿದೆ.
ಜು.10ರಂದು ಶಾಸಕರು ಸ್ಪೀಕರ್ ಕಚೇರಿಗೆ ಬಂದು ತಮ್ಮ ಕೈ ಬರಹದಲ್ಲಿ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.

ಅಂದು ಉಮೇಶ್ ಜಾಧವ್ ರಾಜೀನಾಮೆಯನ್ನು ಅಂಗೀಕರಿಸಿರುವಾಗ ಇಂದು ಶಾಸಕರನ್ನು ಅನರ್ಹತೆಗೊಳಿಸಬೇಕೆಂದು, ಇಲ್ಲವೇ ರಾಜೀನಾಮೆ ಪತ್ರವನ್ನು ವಿಳಂಬ ಮಾಡಬೇಕೆಂದು ಹೇಳುತ್ತಿರುವುದು ಏಕೆ? ಎಂದು ನ್ಯಾಯಮೂರ್ತಿಗಳನ್ನು ಪ್ರಶ್ನಿಸಿದರು.

ಅನರ್ಹತೆ ದೂರು ನೀಡುವ ಮುನ್ನವೇ ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅನರ್ಹತೆ ಪ್ರಶ್ನೆಯೇ ಬರುವುದಿಲ್ಲ. ಅಲ್ಲದೆ, ಕೇರಳ ಮತ್ತು ಗೋವಾ ಸೇರಿದಂತೆ ಬೇರೆ ಬೇರೆ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಸ್ಪೀಕರ್‍ಗೆ ನಿರ್ದೇಶನ ನೀಡಿರುವ ನಿದರ್ಶನಗಳಿವೆ ಎಂದು ವಾದ ಮಂಡಿಸಿದರು.

ಶಾಸಕರೊಬ್ಬರು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದಾಗ ವಿಪ್ ಜಾರಿ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಅಲ್ಲದೆ ಕಲಂ 190(2) ಪ್ರಕಾರ ರಾಜೀನಾಮೆ ನೀಡುವುದು ಶಾಸಕರ ಹಕ್ಕು. ಇದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದರು.

ವಿಧಾನಸಭೆಯ ನಿಯಮಾವಳಿ ಪ್ರಕಾರವೇ ಶಾಸಕರು ಕ್ರಮಬದ್ಧವಾಗಿ ರಾಜೀನಾಮೆ ಕೊಟ್ಟಿದ್ದಾರೆ. ಅವರನ್ನು ಯಾವ ಆಧಾರದ ಮೇಲೆ ಅನರ್ಹಗೊಳಿಸುತ್ತಾರೆ. ಶಾಸಕರೊಬ್ಬರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟ ತಕ್ಷಣವೇ ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಅನರ್ಹಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದರು.

ರಾಜೀನಾಮೆ ಪತ್ರವನ್ನು ವಿಳಂಬ ಮಾಡಲು ಕಾರಣಗಳೇ ಇಲ್ಲ. ಅಲ್ಲದೆ, ಶಾಸಕರಿಗೆ ವಿಧಾನಸಭೆಯ ಕಲಾಪಕ್ಕೆ ಹಾಜರಾಗುವಂತೆ ಒತ್ತಡ ಹಾಕಲಾಗುತ್ತದೆ. ಇವರೆಲ್ಲರೂ ರಾಜೀನಾಮೆ ನೀಡಿ ಜನರ ಮುಂದೆ ಹೋಗಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಶಾಸಕರನ್ನು ಬೆದರಿಸಿರುವ ಕಾರಣಕ್ಕಾಗಿಯೇ ಅನರ್ಹತೆ ಅಸ್ತ್ರ ಬಳಸುತ್ತಿದ್ದಾರೆ ಎಂದು ಪೀಠಕ್ಕೆ ಮುಕುಲ್ ರೋಹ್ಟಗಿ ಮಾಹಿತಿ ನೀಡಿದರು.

ಈ ಹಂತದಲ್ಲಿ ಪೀಠ ಅನರ್ಹತೆಗೊಳಿಸಲು ಇರುವ ಮಾನದಂಡಗಳಾದರೂ ಏನು? ಸ್ಪೀಕರ್ ಯಾವ ಕಾರಣಕ್ಕಾಗಿ ವಿಳಂಬ ಮಾಡುತ್ತಿದ್ದಾರೆ. ರಾಜೀನಾಮೆ ಅಂಗೀಕರಿಸಿದರೆ ಸರ್ಕಾರಕ್ಕೆ ತೊಂದರೆಯೇ ಇದೆಯೇ ಎಂದು ಮತ್ತೊಂದು ಪ್ರಶ್ನೆ ಹಾಕಿದರು. ಹೌದು ಮಹಾಸ್ವಾಮಿಗಳೇ… ರಾಜೀನಾಮೆ ನೀಡಿರುವ ಶಾಸಕರ ಪತ್ರಗಳು ಅಂಗೀಕಾರವಾದರೆ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ. ಹೀಗಾಗಿ ಅವರಿಗೆ ಅನರ್ಹತೆ ಬೆದರಿಕೆ ಹಾಕುತ್ತಿದ್ದಾರೆ.

ಇದೇ ಪ್ರಕರಣಗಳಲ್ಲಿ ಸ್ಪೀಕರ್‍ಗೆ ನಿರ್ದೇಶನ ನೀಡಿರುವ ಉದಾಹರಣೆಗಳಿವೆ. 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಪೀಠ ಕಳೆದ ವರ್ಷ ಸೂಚನೆ ಕೊಟ್ಟಾಗ ನಮ್ಮ ಕಕ್ಷಿದಾರರು ಅದನ್ನು ಅಂದು ವಿರೋಧಿಸಲಿಲ್ಲ, ಈಗ ಏಕೆ ವಿರೋಧಿಸುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಹದಿನೈದು ಮಂದಿ ಶಾಸಕರ ಅನರ್ಹತೆ ಹಾಗೂ ರಾಜೀನಾಮೆ ಪ್ರಕರಣವನ್ನು ನಾಳೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ನಿರ್ಧಾರ ಮಾಡಲಿದ್ದಾರೆ. ಶುಕ್ರವಾರ ನೀಡಿರುವ ಯಥಾಸ್ಥಿತಿ ಆದೇಶವನ್ನು ಹಿಂಪಡೆಯಬೇಕೆಂದು ಸುಪ್ರೀಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ರಾಜೀನಾಮೆ ನೀಡಿರುವ ಪತ್ರವನ್ನು ಅಂಗೀಕರಿಸಲು ಸ್ಪೀಕರ್‍ಗೆ ನಿರ್ದೇಶನ ನೀಡಬೇಕೆಂದು 15 ಮಂದಿ ಅತೃಪ್ತ ಶಾಸಕರು ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇಂದು ಮುಂದುವರೆದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡು ಮುಖ್ಯನ್ಯಾಯಮೂರ್ತಿ ರಂಜನ್ ಗೊಗಯ್, ದೀಪಕ್ ಗುಪ್ತಾ ಹಾಗೂ ಅನಿರುದ್ಧ್ ಬೋಸ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಾದ ಆಲಿಸಿತು.

ಸ್ಪೀಕರ್ ಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ:
ಸ್ಪೀಕರ್ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ, ಕರ್ನಾಟಕ ವಿಧಾನಸಭೆ ಸ್ಪೀಕರ್ ಶಾಸಕರು ನೀಡಿರುವ ರಾಜೀನಾಮೆಯನ್ನು ಅಂಗೀಕಾರ ಮಾಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಅವರೊಬ್ಬ ಅನುಭವಸ್ಥರು. ನಾಳೆ ಅನರ್ಹತೆ ಮತ್ತು ರಾಜೀನಾಮೆ ಪ್ರಕರಣವನ್ನು ಇತ್ಯರ್ಥ ಮಾಡುತ್ತಾರೆ ಎಂದು ತಿಳಿಸಿದರು.

ಸ್ಪೀಕರ್ ಹುದ್ದೆ ಒಂದು ಸಾಂವಿಧಾನಿಕ ಹುದ್ದೆಯಾಗಿದೆ. ಅವರಿಗೆ ಯಾವುದೇ ನ್ಯಾಯಾಲಯಗಳು ಇಂತಿಷ್ಟೇ ಸಮಯಾವಕಾಶದಲ್ಲಿ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ನಿರ್ದೇಶನ ನೀಡಲು ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿಗಳ ಪೀಠಕ್ಕೆ ಸಿಂಘ್ವಿ ಪ್ರಶ್ನೆ ಮಾಡಿದರು.

ಶಾಸಕರು ರಾಜೀನಾಮೆ ನೀಡಿರುವ ಪತ್ರಗಳು ಕ್ರಮಬದ್ಧವಲ್ಲ ಎಂದು ಸ್ಪೀಕರ್ ಹೇಳಿದ್ದರು. ನಿಯಮಾವಳಿಗಳ ಪ್ರಕಾರವೇ ಪತ್ರ ನೀಡಬೇಕೆಂದು ಸೂಚಿಸಿದ್ದಾರೆ. ಅಲ್ಲದೆ, ಸ್ಪೀಕರ್ ಅವರ ಕೊಠಡಿಯಲ್ಲಿ ಗೈರು ಹಾಜರಾದಾಗ ರಾಜೀನಾಮೆ ಪತ್ರ ನೀಡಿದರೆ ಅಂಗೀಕರಿಸಲು ಹೇಗೆ ಸಾಧ್ಯ? ಸ್ಪೀಕರ್ ಅವರು ಅವರು ತಮ್ಮ ವಿವೇಚನೆ ಬಳಸಿ ತೀರ್ಮಾನಿಸುತ್ತಾರೆ. ನ್ಯಾಯಾಲಯ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಹೇಳಿದರು.

ಇದಕ್ಕೆ ತುಸು ಅಸಮಾಧಾನ ವ್ಯಕ್ತಪಡಿಸಿದ ಪೀಠ ನೀವು ನಿಮ್ಮ ಅನುಕೂಲ ತಕ್ಕಂತೆ ನ್ಯಾಯಾಲಯವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಈ ಹಿಂದೆ 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಇದೇ ನ್ಯಾಯಾಲಯ ತೀರ್ಪು ನೀಡಿದಾಗ ಅಂದು ಏಕೆ ಮೌನವಹಿಸಿದ್ದೀರಿ? ನಿಮ್ಮ ಪರಿಸ್ಥಿತಿಗೆ ಅನುಕೂಲವಾದ ಕಾರಣ ನೀವು ಮೌನಕ್ಕೆ ಶರಣಾಗಿದ್ದೀರ ಎಂದು ಛಾಟಿ ಬೀಸಿದರು.

ನಾವು ನ್ಯಾಯಾಲಯದ ವ್ಯಾಪ್ತಿಯನ್ನು ಪ್ರಶ್ನಿಸುತ್ತಿಲ್ಲ. ಆದರೆ ಸ್ಪೀಕರ್ ವ್ಯಾಪ್ತಿಯನ್ನು ಪ್ರಶ್ನಿಸಬಾರದೆಂಬುದಷ್ಟೇ ನಮ್ಮ ಕಳಕಳಿ. ಸ್ಪೀಕರ್ ಸೂಕ್ತವಾದ ನಿರ್ಧಾರ ಕೈಗೊಳ್ಳುತ್ತಾರೆ. ಮೊದಲು ಯಥಾಸ್ಥಿತಿ ಆದೇಶವನ್ನು ಹಿಂಪಡೆಯಬೇಕೆಂದು ಕೋರಿದರು.

ರಾಜೀನಾಮೆ ನೀಡಿರುವ ಶಾಸಕರೆಲ್ಲರೂ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಇದರಲ್ಲಿ ಬಿಜೆಪಿ ಮುಖಂಡರಾದ ಅಶ್ವತನಾರಾಯಣ ಹಾಗೂ ಸಂತೋಷ್ ಎಂಬುವರು ಶಾಮೀಲಾಗಿದ್ದಾರೆ. ಇದಕ್ಕೆ ಸಾಕಷ್ಟು ಪುರಾವೆಗಳಿವೆ. ಶಾಸಕರ ಉದ್ದೇಶವೇ ಸರ್ಕಾರವನ್ನು ಅಸ್ಥಿರಗೊಳಿಸುವುದು. ನೀವು ರಾಜೀನಾಮೆ ಅಂಗೀಕರಿಸಲು ಸ್ಪೀಕರ್‍ಗೆ ನಿರ್ದೇಶಿಸಿದರೆ ಸರ್ಕಾರ ಬಹುಮತ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಈ ತೀರ್ಮಾನವನ್ನು ಸ್ಪೀಕರ್ ವಿವೇಚನೆಗೆ ಬಿಡಿ ಎಂದು ಮನವಿ ಮಾಡಿದರು. ಶಾಸಕರು ನ್ಯಾಯಾಲಯದ ಮೆಟ್ಟಿಲು ಹತ್ತುವವರೆಗೂ ನಿಮ್ಮ ಸ್ಪೀಕರ್ ಏನು ಮಾಡುತ್ತಿದ್ದರು? ಅವರ ರಾಜೀನಾಮೆಯನ್ನು ತಡೆಯುತ್ತಿರುವ ಶಕ್ತಿಗಳು ಯಾವುದು? ಎಂದು ಪ್ರಶ್ನಿಸಿದರು.

# ಸರ್ಕಾರ ಕೆಡುವ ಕುತಂತ್ರ:
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ ವಾದ ಮಂಡಿಸಿದ ರಾಜೀವ್ ಧವನ್, ಶಾಸಕರು ರಾಜೀನಾಮೆ ನೀಡಿರುವ ಉದ್ದೇಶವೇ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ದುರದ್ದೇಶ ಹೊಂದಿದ್ದಾರೆ. ಅವರೆಲ್ಲರೂ ಮುಂಬೈ ಸೇರಿದಂತೆ ಬೇರೆ ಬೇರೆ ಕಡೆ ವಾಸ್ತವ್ಯ ಮಾಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ನ್ಯಾಯಾಲಯ ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಏಕಾಏಕಿ 15 ಮಂದಿ ಶಾಸಕರು ರಾಜೀನಾಮೆ ನೀಡಿದ್ದರ ಉದ್ದೇಶವಾದರೂ ಏನು? ಗುರುವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕು. ಈ ತಿಂಗಳ ಅಂತ್ಯದೊಳಗೆ ಹಣಕಾಸು ಮಸೂದೆ ಸದನದಲ್ಲಿ ಅಂಗೀಕಾರವಾಗಬೇಕು.

ಒಂದು ವೇಳೆ ಸ್ಪೀಕರ್ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದರೆ ಸರ್ಕಾರ ಏನಾಗುತ್ತದೋ ಎಂಬುದು ಗೊತ್ತಿಲ್ಲ. ಸ್ಪೀಕರ್‍ಗೆ ಯಾವುದೇ ನ್ಯಾಯಾಲಯಗಳು ನಿರ್ದೇಶನ ನೀಡಲು ಸಾಧ್ಯವಿಲ್ಲ. ಅವರು ಸುದೀರ್ಘವಾಗಿ ವಿಚಾರಣೆ ನಡೆಸಲು ಅವಕಾಶ ಕಲ್ಪಿಸುವಂತೆ ಪೀಠಕ್ಕೆ ಮನವಿ ಮಾಡಕೊಂಡರು.

Facebook Comments

Sri Raghav

Admin