ದಯನೀಯ ಸ್ಥಿತಿಯಲ್ಲಿ ಶೇ.20ರಷ್ಟು ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.8- ರಾಜ್ಯದಲ್ಲಿ ಶೇ.20ರಷ್ಟು ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳು ಪುನಃಶ್ಚೇತನಗೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಜತೆಗೆ ಎಂಎಸ್‍ಎಂಇಗಳ ಸ್ಥಿತಿಯು ಕೂಡ ಕಳವಳಕಾರಿಯಾಗಿದೆ ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.

ಮೈಸೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಹೊಡೆತದಿಂದ ಆರ್ಥಿಕ ಸ್ಥಿತಿ ಕುಸಿದಿದೆ. ಇದರ ನಡುವೆ ಸೇವಾ ಕ್ಷೇತ್ರಗಳು ಹಾಗೂ ಕೈಗಾರಿಕಾ ವಲಯದಲ್ಲಿ ಹಣದ ವಹಿವಾಟು ಕಷ್ಟಕರವಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ನಿಖರ ಸಂಪರ್ಕದಲ್ಲಿದ್ದು, ಪರಿಸ್ಥಿತಿ ಯನ್ನು ಸುಧಾರಿಸಲು ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು. ಪುನಃಶ್ಚೇತನಗೊಳಿಸಲು ಉದ್ಯಮಿಗಳಿಗೆ ಸರ್ಕಾರ ಸದ್ಯ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.

ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಲು ಅವಕಾಶ ಕೊಟ್ಟಿದೆ. ಕೆಲವು ಯೋಜನೆಗಳು ಜಾರಿಗೊಳಿಸಿದೆ. ಅದು ಸಮರ್ಪಕವಾಗಿ ಕಾರ್ಯಗತ ಗೊಳಬೇಕಾಗಿದೆ ಎಂದು ಹೇಳಿದರು.

ಮೈಸೂರು ಕೈಗಾರಿಕಾ ವಲಯದಲ್ಲಿ ಪ್ರಮುಖವಾದ ಕೇಂದ್ರವಾಗಿದೆ. ಇಲ್ಲಿ ನಮ್ಮ ಸಂಘದ ಸದಸ್ಯರ ಜತೆ ಸಭೆ ನಡೆಸಲಿದ್ದೇವೆ. ಇಲ್ಲಿನ ಕೃಷಿ ಆಧಾರಿತ ಉದ್ದಿಮೆಗಳು , ಜವಳಿ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವಾರು ಪ್ರಮುಖ ವಸ್ತುಗಳು ಇಲ್ಲಿಂದು ರಫ್ತಾಗುತ್ತವೆ.

ಮೈಸೂರಿನಲ್ಲೇ ಸುಮಾರು 3,9795ಕ್ಕೂ ಹೆಚ್ಚು ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಿದ್ದು, 53 ಮಧ್ಯಮ ಹಾಗೂ 45 ಬೃಹತ್ ಮತ್ತು 5 ಮೆಗಾ ಉದ್ಯಮಿಗಳಿದ್ದು , 2,61,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. 8 ಕೈಗಾರಿಕಾ ಪ್ರದೇಶ ಹಾಗೂ ಇಂಡಸ್ಟ್ರಿಯಲ್ ಎಸ್ಟೇಟ್‍ಗಳಲ್ಲಿ ಉದ್ಯಮಗಳು ಪ್ರಗತಿ ಸಾಧಿಸಲು ಗುರಿ ಹೊಂದಿದೆ ಎಂದು ಹೇಳಿದರು.

ಇಲ್ಲೂ ಕೂಡ ಕೈಗಾರಿಕೆಗಳು ಹಲವು ಸಮಸ್ಯೆಗಳನ್ನು ಎದುರಿಸು ತ್ತಿದೆ. ಆಸ್ತಿ ತೆರಿಗೆ ಹಾಗೂ ಇತರೆ ಸಮಸ್ಯೆಗಳಿಗೆ ನಮ್ಮ ಸಂಘದ ಸದಸ್ಯ ರೊಂದಿಗೆ ಸಂವಾದ ನಡೆಸಲಿದ್ದೇವೆ. ಮುಂಬರುವ 2020 ಮೇನಲ್ಲಿ ದಾಬಸ್‍ಪೇಟೆಯಲ್ಲಿರುವ ಕಾಸಿಯಾ ವಸ್ತು ಪ್ರದರ್ಶನ ಮೈದಾನದಲ್ಲಿ ಅಂತಾರಾಷ್ಟ್ರೀಯ ಬೃಹತ್ ಮೇಳವನ್ನು ರೂಪಿಸಲಾಗುತ್ತಿದೆ.

ವ್ಯಾಪಾರ ಮತ್ತು ಹೂಡಿಕೆಯನ್ನು ವಿಸ್ತರಿಸಲು ಯುರೋಪ್, ಏಷ್ಯಾ ಖಂಡಗಳು, ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾ ಖಂಡಗಳಲ್ಲಿ ತಂತ್ರಜ್ಞಾನ ವರ್ಗಾವಣೆ ಮತ್ತು ಜಂಟಿ ಉದ್ಯಮ ಸ್ಥಾಪನೆಗೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಉದ್ಯಮ ಅಭಿವೃದ್ಧಿ ಭಾಗವಾಗಿ ಸ್ಮಾರ್ಟ್ ಆ್ಯಪ್‍ಗಳನ್ನು ಉತ್ತೇಜಿಸುವ ಮತ್ತು ಕಾರ್ಯಕ್ರಮಗಳನ್ನು ಕಾಸಿಯಾ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ ನಡೆಸುತ್ತಿದೆ ಎಂದು ಹೇಳಿದರು.

Facebook Comments